ಚನ್ನರಾಯಪಟ್ಟಣ: ತಾಲ್ಲೂಕಿನ ಗಡಿಭಾಗದ ದಿಡಗ-ತುಮಕೂರು ಏತನೀರಾವರಿ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದ್ದು 74 ಕೋಟಿ ರೂ. ಮಂಜೂರಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚನ್ನರಾಯಪಟ್ಟಣ ತಾಲೂಕಿನ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದೆ. ಶನಿವಾರ ಹಾಸನದಲ್ಲಿ ಸಿಎಂ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಲಿದ್ದು ಈ ಭಾಗದ ರೈತರ ಕನಸು ನನಸಾಗಲಿದೆ ಎಂದರು.
ಇಂದು ಹಾಸನದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, 74 ಕೋಟಿ ರೂ. ವೆಚ್ಚದ ದಿಡಿಗ-ತುಮಕೂರು ಏತನೀರಾವರಿ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕನ್ನು ಸಂಪೂರ್ಣ ನೀರಾವರಿ ಯೋಜನೆಗೊಳಿಸುವ ಕಾರ್ಯಕ್ಕೆ ಮೊದಲು ಅಡಿಗಲ್ಲು ಇಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದರೆ ತಪ್ಪಾಗಲಾರದು. ಮಾಜಿ ಕಂದಾಯ ಸಚಿವ ದಿ.ಹೆಚ್.ಸಿ.ಶ್ರೀಕಂಠಯ್ಯ ತವರೂರಿಗೆ ಹೇಮಾವತಿಯ ನೀರನ್ನು ತರುವ ಕನಸು ಕಂಡಿದ್ದು ಸಕಾರಗೊಳಿಸುವ ನಿಟ್ಟಿನಲ್ಲಿ ಹೋರಾಟ ಕೈಗೊಂಡು ಹಗಲಿರುಳು ಎನ್ನದೆ ಶ್ರಮಿಸಿದ್ದರು ಎಂದು ನೆನಪು ಮಾಡಿಕೊಂಡರು.
ಕಳೆದ 20-25 ವರ್ಷಗಳ ಹಿಂದೆ ತಾಲೂಕು ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮಳೆಯಾಗದೆ ಬರಪೀಡಿತ ಪ್ರದೇಶವಾಗಿತ್ತು. ಕೆರೆ-ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿದ್ದು ಅಂತರ್ಜಲ ಕುಸಿತಗೊಂಡು ಕೊಳವೆ ಬಾವಿಗಳು ಬತ್ತಿ ಬರಿದಾಗಿದ್ದವು. ತೆಂಗಿನ ಮರಗಳು ನಾಶವಾಗಿದ್ದವು. ರೈತರ ಬದುಕು ಬೀದಿಗೆ ಬಿದ್ದಿತ್ತು.
ಇದನ್ನೆಲ್ಲ ಕಂಡ ಹೆಚ್.ಸಿ.ಶ್ರೀಕಂಠಯ್ಯನವರು ಆ ದಿನಗಳಲ್ಲಿಯೇ ತಾಲೂಕಿಗೆ ಹೇಮಾವತಿ ನೀರನ್ನು ತರಬೇಕೆಂದು ಶಪಥ ಮಾಡಿದ್ದರು. ಅವರ ಕನಸಿನಂತೆ ಹಂತ ಹಂತವಾಗಿ ತಾಲ್ಲೂಕು ನೀರಾವರಿ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ ಎಂದರು.
ಶ್ರೀಕಂಠಯ್ಯನವರ ಹಾದಿಯಲ್ಲಿಯೇ ಸಾಗುತ್ತಿರುವ ನಮ್ಮೆಲ್ಲರ ನಾಯಕತ್ವವೂ ಸಹ ಕಳೆದ ಚುನಾವಣೆ ಸಂದರ್ಭದಲ್ಲಿ ದಿಡಗ-ತುಮಕೂರು ಹಾಗೂ ಕಬ್ಬಳಿ ವ್ಯಾಪ್ತಿಯ ಕೆರೆಗಳಿಗೆ ಏತನೀರಾವರಿ ಯೋಜನೆಯಡಿ ನೀರು ತುಂಬಿಸುವ ಬಗ್ಗೆ ಭರವಸೆ ನೀಡಿದ್ದೆವು. ಅದರಂತೆ ನಮ್ಮ ಸರ್ಕಾರದೊಂದಿಗೆ ಪ್ರಸ್ತಾವನೆ ನಡೆಸಿ ಕಾರ್ಯಗತಗೊಳಿಸಿದ್ದೇವೆ ಎಂದರು.
ಕಳೆದ ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ತಾಲ್ಲೂಕಿನ ದಿಡಗ ಗ್ರಾಮದ ಡಾ.ರಾಜ್ ವೃತ್ತದಲ್ಲಿ ಈ ಭಾಗದ ರೈತರಿಗೆ ಕೊಟ್ಟ ಮಾತಿನಂತೆ ಕೆರೆಗೆ ನೀರು ಹರಿಸಲು ಸರ್ಕಾರದಿಂದ ಅನುಮೋದನೆ ದೊರೆತಿರುವುದು ಹರ್ಷ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದಿಡಗ-ತುಮಕೂರು ಏತನೀರಾವರಿ ಯೋಜನೆಗೆ ಹಾಸನದಲ್ಲಿ ಶಂಕುಸ್ಥಾಪನೆ ನೆರವಿರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ, ಮುಖಂಡರು ಹಾಗೂ ಗಣ್ಯರು ಮತ್ತು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.










