ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: ಓರ್ವ ಪ್ರಯಾಣಿಕ ಸಾವು, ಹಲವರಿಗೆ ಗಾಯ

fire has broken out on an express train in Andhra Pradesh, killing one passenger and injuring several others.

ವಿಶಾಖಪಟ್ಟಣಂ: ಆಂಧ್ರ ಪ್ರದೇಶದಲ್ಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ದುರಂತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಸುಮಾರು 66 ಕಿ.ಮೀ ದೂರದಲ್ಲಿರುವ ಯಲಮಂಚಿಲಿಯಲ್ಲಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ರೈಲಿನೊಳಗಿದ್ದ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ರೈಲಿನ (ಸಂಖ್ಯೆ 18189) ಬಿ1 ಮತ್ತು ಎಂ2 ಬೋಗಿಗಳು ಬೆಂಕಿಗೆ ಆಹುತಿಯಾದವು ಮತ್ತು ರೈಲ್ವೆ ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ರೈಲ್ವೆ ಅಧಿಕಾರಿಗಳು ಸಹ ಕಾರ್ಯಪ್ರವೃತ್ತರಾಗಿ ಪ್ರಯಾಣಿಕರನ್ನು ರೈಲಿನಿಂದ ಇಳಿಸುವಲ್ಲಿ ಸಹಾಯ ಮಾಡಿದರು. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿತು ಎಂದು ದಕ್ಷಿಣ ಮಧ್ಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಕಿಯ ಬಗ್ಗೆ ಪೊಲೀಸರಿಗೆ ಬೆಳಿಗ್ಗೆ 12.45 ಕ್ಕೆ ಮಾಹಿತಿ ಸಿಕ್ಕಿತು. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು. ಪೈಕಿ ಬಿ 1 ಬೋಗಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವರದಿಗಾರರಿಗೆ ತಿಳಿಸಿದ್ದಾರೆ.

ಬೆಂಕಿ ಅವಘಡದಿಂದ ಹಾನಿಗೊಳಗಾದ ಎರಡು ಬೋಗಿಗಳನ್ನು ಎರ್ನಾಕುಲಂ ಕಡೆಗೆ ಸಾಗುತ್ತಿದ್ದ ರೈಲಿನಿಂದ ಬೇರ್ಪಡಿಸಲಾಗಿದೆ. ಹಾನಿಗೊಳಗಾದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ಕಳುಹಿಸಲಾಗುವುದು. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ಎರಡು ವಿಧಿವಿಜ್ಞಾನ ತಂಡಗಳು ಕೆಲಸ ಮಾಡುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

fire has broken out on an express train in Andhra Pradesh, killing one passenger and injuring several others.