ಹಾಸನ: ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ. ದೇವೇಗೌಡ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಾಸನ ಜಿಲ್ಲೆಯ ಜನತೆ ಎರಡು ಬಾರಿ ಹೊರತುಪಡಿಸಿ ಉಳಿದ ಎಲ್ಲಾ ಸಂದರ್ಭಗಳಲ್ಲಿ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು. ನನಗೆ ಈಗ 93 ವರ್ಷ. ಜೀವನದ ಕೊನೆಯ ಉಸಿರಿನವರೆಗೂ ಹೋರಾಟ ಮಾಡುತ್ತೇನೆ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇದ್ದರೂ ಅದಕ್ಕೆ ನಾನು ಕಾಳಜಿ ಕೊಡೋದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ 30 ಜಿಲ್ಲೆಗಳನ್ನು ಬಿಟ್ಟು ಹಾಸನದಲ್ಲೇ ಕಾಂಗ್ರೆಸ್ ಎರಡು ವರ್ಷಗಳಲ್ಲಿ ಎರಡು ಬಾರಿ ಸಿಎಂ ಸಮಾವೇಶ ನಡೆಸಿರುವುದೇಕೆ ಎಂದು ಪ್ರಶ್ನಿಸಿದರು. ಉಸ್ತುವಾರಿ ಸಚಿವ ರಾಜಣ್ಣ ಒಮ್ಮೆ, ಕೃಷ್ಣಭೈರೇಗೌಡ ಮತ್ತೊಮ್ಮೆ ಕಾರ್ಯಕ್ರಮ ನಡೆಸಿದ್ದಾರೆ. ಈ ಜಿಲ್ಲೆಯ ಮೇಲೇಕೆ ಇಷ್ಟು ಗುರಿ ಎಂದು ಗುಡುಗಿದರು.
ಕುಮಾರಸ್ವಾಮಿ ಅವರು ಪಂಚರತ್ನ ಕಾರ್ಯಕ್ರಮವನ್ನು ಜಲಧಾರೆಯ ಮೂಲಕ ರಾಜ್ಯದಾದ್ಯಂತ ನಡೆಸಿದರು. ರಾತ್ರಿ 1–2 ಗಂಟೆಯವರೆಗೂ ಜನಸ್ತೋಮ ಇರುತ್ತಿತ್ತು. ರೈತರ ಸಾಲಮನ್ನಾ ಮಾಡಿದ್ದೇವೆ. ಪದವಿ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಸ್ಥಾಪಿಸಿದ್ದೇವೆ. ಹಾಸನಕ್ಕೆ ಮೆಡಿಕಲ್ ಕಾಲೇಜು ಬಂದಾಗ ಹೊರ ಜಿಲ್ಲೆಯವರನ್ನು ಕರೆದು ಆರಂಭ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ಯಾವಲಾಪುರಕ್ಕೆ ಬೆಂಕಿಹಾಕಿದ ಘಟನೆ ಇನ್ನೂ ನನಗೆ ನೆನಪಿದೆ. ರೇವಣ್ಣಗೆ ನಾನು ಹೇಳಿದ್ದೇನೆ, ಈಗ ಎಲ್ಲವನ್ನೂ ಅನೌನ್ಸ್ ಮಾಡುತ್ತಾರೆ. ಅವರು ಮಾಡಿರುವ ಸಭೆಗಳಿಗಿಂತ ದೊಡ್ಡ ಮಟ್ಟದ ಸಭೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ನಾವು ಯಾವ ಸಮಾಜಕ್ಕೆ ಅನ್ಯಾಯ ಮಾಡಿದ್ದೇವೆ? ಸಕಲೇಶಪುರ, ಬೇಲೂರು ಕ್ಷೇತ್ರಗಳಿಂದ ಒಬ್ಬರನ್ನು ಎಂಎಲ್ಸಿ ಮಾಡಿದ್ದೇವೆ. ಯಾರಿಗೆ ಅನ್ಯಾಯವಾಗಿದೆ ಹೇಳಲಿ ಎಂದು ಪ್ರಶ್ನಿಸಿದರು. ಜಿಲ್ಲೆಯ ಪ್ರಗತಿಗೆ ರೇವಣ್ಣ ಮಾಡಿದ ಕೆಲಸಗಳ ಪಟ್ಟಿ ಈಗ ಕೊಡಲ್ಲ ಎಂದರು.
ರೇವಣ್ಣನ ವರ್ಚಸ್ಸು ಮುಗಿಸಲು ಏನೇನು ಬೇಕೋ ಮಾಡಿದರು, ಆದರೆ ಇದನ್ನ ಸಹಿಸಲು ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಜನರ ಆಶೀರ್ವಾದದಿಂದ ಶಾಸಕರು, ಪರಾಜಿತ ಅಭ್ಯರ್ಥಿಗಳ ಸಹಕಾರದಿಂದ ಜನವರಿ 23 ಅಥವಾ 24ರಂದು ಹಾಸನದಲ್ಲಿ ಬಹಿರಂಗ ಸಮಾವೇಶ ನಡೆಸಲಾಗುವುದು ಎಂದು ಘೋಷಿಸಿದರು.
ಈ ಸಭೆಗೆ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಯಾವ ಸ್ಥಿತಿಯಲ್ಲಿದೆ ಎಂದು ಲೇವಡಿ ಮಾಡಿದ ದೇವೇಗೌಡ, 14 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಿಗೆ ಸೀಮಿತವಾಗಿದೆ ಎಂದರು.
ಬಿಹಾರದಲ್ಲಿ ಗ್ಯಾರಂಟಿ ಮಾತು ಹೇಳಿದ ಕಾಂಗ್ರೆಸ್ಗೆ ಆರು ಸ್ಥಾನ ಮಾತ್ರ ಸಿಕ್ಕಿವೆ. ಹಾಸನದ ವೇದಿಕೆಯಲ್ಲಿ ನಡೆದ ನರ್ತನಗಳನ್ನೂ ಗಮನಿಸಿದ್ದೇನೆ ಎಂದು ಕಿಡಿಕಾರಿದರು. ಕಾಂಗ್ರೆಸ್ಗೆ ಒಂದೇ ಸಿದ್ಧಾಂತ – ಅದು ಎಂದಿಗೂ ಶಾಶ್ವತ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾನು ಪಿಎಂ ಆಗಬೇಕು ಎಂದು ಅರ್ಜಿ ಹಾಕಿದ್ದೇನಾ? ಚರ್ಚೆ ಆಗಲಿ ಎಂದು ಸವಾಲು ಹಾಕಿದ ಅವರು, ಚರಣ್ ಸಿಂಗ್ ಅವರನ್ನು ಪ್ರಧಾನಿ ಎಂದು ಕರೆದು, ನೆಹರೂ ಕೂತ ಜಾಗದಲ್ಲಿ ಅವರು ಕೂರಬಾರದು ಎಂದು ನಿರ್ಧಾರ ವಾಪಸ್ ಪಡೆದದ್ದು ಕಾಂಗ್ರೆಸ್ ಇತಿಹಾಸ ಎಂದು ನೆನಪಿಸಿದರು.
ಜನತೆಯ ಆಶೀರ್ವಾದದಿಂದಲೇ ನಾವು ಬದುಕಿದ್ದೇವೆ. ಅಧಿಕಾರಕ್ಕೆ ಅಂಟಿಕೊಂಡು ಕುಳಿತ ವ್ಯಕ್ತಿ ನಾನು ಅಲ್ಲ. ನನ್ನ ಜೀವನದ ಹೋರಾಟದ ದಾರಿಯೇ ನನ್ನ ರಾಜಕೀಯ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ಐದು ಜನರು ಗೆದ್ದಿದ್ದಾರೆ. ಬಿಜೆಪಿ ಸಿಎಂ ಹಾಗೂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಎನ್ಡಿಎಯಲ್ಲಿದ್ದೇವೆ. ಪಾರ್ಲಿಮೆಂಟ್ ಸೇರಿದಂತೆ ಎಲ್ಲ ಕಡೆ ಒಟ್ಟಿಗೆ ಇರುತ್ತೇವೆ ಎಂದು ಘೋಷಿಸಿದರು.
ನೀವು ನಮ್ಮನ್ನ ಮುಗಿಸಿದ್ದೀರಾ? ನಮಗೆ ಶಕ್ತಿ ಇಲ್ಲ ಅಂತಾ ಹೇಳಿದ್ರು. ಅದಕ್ಕೇ ನಾವು ಎನ್ಡಿಎ ಜೊತೆ ಹೋಗಿದ್ದೇವೆ. ನೀವು ಯಾಕೆ ಸ್ಟಾಲಿನ್ ಮನೆ ಬಾಗಿಲಿಗೆ ಹೋಗ್ತೀರಾ?ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಇಂದು ನಮ್ಮ ಕುಲದೇವರಿಗೆ ಪೂಜೆ ಸಲ್ಲಿಸಿದ್ದೇವೆ. ನಾವು ವಂಶಪಾರಂಪರ್ಯವಾಗಿ ಈಶ್ವರನ ಆರಾಧಕರು. 93 ವರ್ಷವಾದರೂ ಹೋರಾಟದ ಕೆಚ್ಚೆದೆಯನ್ನು ಜನತೆ ನನಗೆ ಕೊಟ್ಟಿದ್ದಾರೆ ಎಂದು ಹೇಳಿದರು.










