ಹಾಸನ: ನೂರು ವರ್ಷಗಳ ಸುದೀರ್ಘ ಮತ್ತು ಸಾರ್ಥಕ ಜೀವನವನ್ನು ಪೂರೈಸಿದ ಹಿರಿಯ ಜೀವವೊಂದಕ್ಕೆ ಅವರ ಕುಟುಂಬಸ್ಥರು ಅದ್ದೂರಿ ಜನ್ಮದಿನದ ಸಂಭ್ರಮವನ್ನು ಏರ್ಪಡಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.
ನಗರದ ರಕ್ಷಣಾಪುರಂ ನಿವಾಸಿಯಾದ ಜೆ. ಜಾಶ್ವರಾಜು ಅವರು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಇಲ್ಲಿನ ಕುರುಹಿನಶೆಟ್ಟಿ ಭವನದಲ್ಲಿ ವಿಶೇಷ ಬರ್ತ್‌ಡೇ ಸೆಲಬ್ರೇಷನ್ ಹಮ್ಮಿಕೊಳ್ಳಲಾಗಿತ್ತು.
ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಶತಾಯುಷಿ ಜಾಶ್ವರಾಜು ಅವರು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು.
ಸಾರ್ಥಕ ಬದುಕಿನ ಸಂಭ್ರಮ ಜೆ. ಜಾಶ್ವರಾಜು ಅವರು ನಾಲ್ವರು ಗಂಡು ಮಕ್ಕಳು, ಒಬ್ಬ ಪುತ್ರಿ, ಒಂಭತ್ತು ಮಂದಿ ಮೊಮ್ಮಕ್ಕಳು ಹಾಗೂ ಐದು ಮಂದಿ ಮರಿಮಕ್ಕಳನ್ನು ಹೊಂದಿದ್ದು, ಇಂದು ಅವರೆಲ್ಲರ ಸಮ್ಮುಖದಲ್ಲಿ ತಮ್ಮ ನೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.
ವಯೋಸಹಜ ನಿಶ್ಯಕ್ತಿಯ ನಡುವೆಯೂ ಜಾಶ್ವರಾಜು ಅವರು ಎಲ್ಲರನ್ನೂ ನಗುಮುಖದಿಂದ ಮಾತನಾಡಿಸುತ್ತಾ ಸಂಭ್ರಮದಲ್ಲಿ ಭಾಗಿಯಾದರು.
ಗಣ್ಯರಿಂದ ಸನ್ಮಾನ ಈ ಸಂಭ್ರಮದ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಂಬಂಧಿಕರು ಮತ್ತು ಗೆಳೆಯರು ಶತಾಯುಷಿಗಳನ್ನು ಸನ್ಮಾನಿಸಿ, ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನೂರು ವರ್ಷ ಪೂರೈಸಿರುವುದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಕಾರ್ಯಕ್ರಮಕ್ಕೆ ಬಂದಿದ್ದವರು ಸಂತಸ ವ್ಯಕ್ತಪಡಿಸಿದರು.
ಕುಟುಂಬಸ್ಥರು ಹಿರಿಯ ಜೀವಕ್ಕೆ ಗೌರವ ಸಲ್ಲಿಸಲು ಇಡೀ ಭವನವನ್ನು ವಿಶೇಷವಾಗಿ ಅಲಂಕರಿಸಿದ್ದು, ಬಂದಿದ್ದ ಅತಿಥಿಗಳಿಗೆ ಈ ಸಮಾರಂಭವು ಒಂದು ಸ್ಮರಣೀಯ ಕ್ಷಣವಾಗಿ ಮಾರ್ಪಟ್ಟಿತ್ತು.
Families of senior citizens who have lived a long and meaningful life for a hundred years Has paid respect by arranging a grand birthday celebration.










