ಹೊಳೆನರಸೀಪುರ: ಜನಪದವೇ ನಮ್ಮ ಸಂಸ್ಕೃತಿಯ ಮೂಲ ತಾಯಿಬೇರು: ಡಾ. ಶಿವಕುಮಾರ್ ಪಿ.ಆರ್.

Dr. Shivakumar P.R., Associate Professor at H.D. Devegowda First Grade College, Paduvaluhippe, opined that folklore is the root and mother root of our culture.

ಹೊಳೆನರಸೀಪುರ: ಜನಪದವೇ ನಮ್ಮ ಸಂಸ್ಕೃತಿಯ ಮೂಲ ತಾಯಿಬೇರು ಎಂದು ಪಡುವಲುಹಿಪ್ಪೆ ಹೆಚ್.ಡಿ.ದೇವೇಗೌಡರ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶಿವಕುಮಾರ್ ಪಿ.ಆರ್. ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕು ಜನಪದ ಪರಿಷತ್ತು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸಂಕ್ರಾಂತಿ ಜಾನಪದ ಜಾತ್ರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಭಾಷೆ ಹುಟ್ಟಿದ ಕ್ಷಣದಿಂದಲೇ ಜನಪದವೂ ಅಸ್ತಿತ್ವಕ್ಕೆ ಬಂದಿದೆ. ಕನ್ನಡದ ಮೊದಲ ಗ್ರಂಥ ‘ಕವಿರಾಜಮಾರ್ಗ’ದಲ್ಲಿಯೇ ಜನಪದದ ಕುರಿತು ಉಲ್ಲೇಖಗಳಿವೆ. ಜನಪದವು ಕೇವಲ ಗೀತೆಗಳಷ್ಟೇ ಅಲ್ಲ; ಆಚರಣೆಗಳು, ಆಟಗಳು, ಕಥೆಗಳು, ಗಾದೆಗಳು, ಲಾವಣಿಗಳು ಮತ್ತು ಒಗಟುಗಳನ್ನೊಳಗೊಂಡ ವಿಶಾಲವಾದ ಮೌಖಿಕ ಪರಂಪರೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಧಾರಾವಾಹಿಗಳ ಅತಿಯಾದ ಪ್ರಭಾವದಿಂದ ಈ ಅಮೂಲ್ಯ ಸಂಸ್ಕೃತಿ ನಶಿಸುತ್ತಿರುವುದು ಆತಂಕಕಾರಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

​ಕಾರ್ಯಕ್ರಮದ ಕುರಿತು ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಜೊತೆಗೆ ಅವರಿಗೆ ಜಾನಪದ ಕಲೆಗಳನ್ನು ಪರಿಚಯಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಅವರು ಕೊಳಲಿನ ಮೂಲಕ ಜಾನಪದ ಗೀತೆಯನ್ನು ನುಡಿಸಿ ಮಕ್ಕಳನ್ನು ರಂಜಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಅನಿಲ್ ಬಿ. ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ನಶಿಸುತ್ತಿರುವ ಜಾನಪದ ಕಲೆಯನ್ನು ಉಳಿಸುವುದೇ ಪರಿಷತ್ತಿನ ಮೂಲ ಉದ್ದೇಶವಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ ಎಂದರು.

​ಜಾತ್ರೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾನಪದ ಗೀತೆ ಗುಂಪುಗಾಯನದಲ್ಲಿ ತೇಜಸ್, ಲಾವಣ್ಯ ಮತ್ತು ಯುಕ್ತ ಅವರ ತಂಡಗಳು ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಜಾನಪದ ನೃತ್ಯದಲ್ಲಿ ಸಾನ್ವಿಕ, ಜಾಹ್ನವಿ ಮತ್ತು ಪೂರ್ವಿಕ ಅವರ ತಂಡಗಳು ವಿಜೇತರಾದವು. ವೈಯಕ್ತಿಕ ಗಾಯನದಲ್ಲಿ 4ನೇ ತರಗತಿಯ ಸಾನ್ವಿಕ ಪ್ರಥಮ ಸ್ಥಾನ ಪಡೆದರು. ನೀತಿಕಥೆ ಮತ್ತು ಒಗಟು ಬಿಡಿಸುವ ಸ್ಪರ್ಧೆಗಳಲ್ಲೂ ಮಕ್ಕಳು ತಮ್ಮ ಪ್ರತಿಭೆ ಮೆರೆದರು. ನಿವೃತ್ತ ಮುಖ್ಯ ಶಿಕ್ಷಕ ನಾಗಣ್ಣ ಹಾಗೂ ಜಾನಪದ ಕಲಾವಿದ ಷಣ್ಮುಕಯ್ಯ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹೊನ್ನಕುಮಾರ್, ಪುಷ್ಪಾವತಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Dr. Shivakumar P.R., Associate Professor at H.D. Devegowda First Grade College, Paduvaluhippe, opined that folklore is the root and mother root of our culture.