ಸಾಮಾಜಿಕ ಕ್ರಾಂತಿಯ ಹರಿಕಾರ ಅರಸು: ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯಲ್ಲಿ ಡಿಸಿ ಲತಾಕುಮಾರಿ ಬಣ್ಣನೆ

ಹಾಸನ: ಸಾಮಾಜಿಕ ಕ್ರಾಂತಿಯ ಹರಿಕಾರ, ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢವಾದಂತಹವರನ್ನು ಎದುರಾಕಿಕೊಂಡು ಬಡವರು, ಹಿಂದುಳಿದವರು, ತುಳಿತಕ್ಕೊಳಗಾದವರ ಪರ ಕಾಳಜಿಯನ್ನು ತೋರಿಸಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕರು ಡಿ.ದೇವರಾಜ ಅರಸು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬುಧವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುಅವರ ೧೧೦ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅರಸು ನಾಯಕತ್ವ ಗುಣವುಳ್ಳ ಮಹಾನ್ ಸಾಧಕರಾಗಿದ್ದಾರೆ.

ತಮಗೆ ಸಿಕ್ಕ ಅಧಿಕಾರವನ್ನು ಸಮಾಜದ ಏಳಿಗೆಗಾಗಿ ಬಳಸಿಕೊಂಡವರು. ಸಮಾಜದಲ್ಲಿದ್ದಂತಹ ಮಲ ಹೊರುವ ಪದ್ಧತಿಯನ್ನು ಹೋಗಲಾಡಿಸಿ, ಬಡವರಿಗೆ ಭೂಮಿ, ಕಾರ್ಮಿಕರಿಗೆ ಸೂರು ಒದಗಿಸಿ ಸಾಮಾಜಿಕ ಕ್ರಾಂತಿಯನ್ನು ಮಾಡಿ, ಶತಶತಮಾನಗಳಲ್ಲೂ ತಮ್ಮ ಹೆಸರು ಉಳಿಯುವ ರೀತಿಯಲ್ಲಿ ಕೆಲಸಗಳನ್ನು ಮಾಡಿದವರು ಅರಸು ಎಂದರು.