ದಾವಣಗೆರೆ: ಕುಡಿದ ಮತ್ತಿನಲ್ಲಿ SSLC ಓದುವ ಮಗಳ ಬ್ಯಾಗ್, ಪುಸ್ತಕ ಸುಟ್ಟ ತಂದೆ, ವಿದ್ಯಾರ್ಥಿನಿಗೆ ಆಸರೆಯಾದ ಖಾಕಿ ಪಡೆ!

ದಾವಣಗೆರೆ: ಕುಡಿತದ ಚಟ ಮನುಷ್ಯನನ್ನು ಎಷ್ಟು ಅಮಾನವೀಯನಾಗಿಸುತ್ತದೆ ಎಂಬುದಕ್ಕೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದ ಘಟನೆ ಕಹಿ ಉದಾಹರಣೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಜ್ಜಾಗುತ್ತಿದ್ದ ರ್ಯಾಂಕ್‌ ವಿದ್ಯಾರ್ಥಿನಿ ಮಗಳ ಓದಿಗೆ ಅಡ್ಡಿಯಾದ ಕುಡುಕ ತಂದೆ, ‘ನೀನು ಓದಬೇಕಿಲ್ಲ’ ಎಂದು ಆಕೆಯ ಮೇಲೆ ಹಲ್ಲೆ ನಡೆಸಿ, ಶಾಲಾ ಬ್ಯಾಗ್ ಹಾಗೂ ಪಠ್ಯಪುಸ್ತಕಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕಿದ್ದಾನೆ.

‘ಓದಬೇಡ’ ಎಂದು ಮಗಳ ಭವಿಷ್ಯಕ್ಕೆ ಬೆಂಕಿ ಹಚ್ಚಿದ ತಂದೆ

ಆರುಂಡಿ ಗ್ರಾಮದ ಚಂದ್ರಮ್ಮ–ಚಿಕ್ಕಪ್ಪ ದಂಪತಿಯ ಪುತ್ರಿ ತೇಜಸ್ವಿನಿ, ಕೆಂಚಿಕೊಪ್ಪ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಆದರೆ ಕುಡಿತದ ಅಮಲಿನಲ್ಲಿ ಮನೆಗೆ ಬಂದ ತಂದೆ ಚಿಕ್ಕಪ್ಪ, ಮಗಳ ಓದಿನ ವಿಚಾರಕ್ಕೆ ಜಗಳವಾಡಿ ಆಕೆಯನ್ನು ಹಲ್ಲೆ ಮಾಡಿದ್ದಾನೆ. ಇದಷ್ಟೇ ಅಲ್ಲದೆ, ಪರೀಕ್ಷೆಗಳು ಹತ್ತಿರವಿರುವ ಈ ಸಂದರ್ಭದಲ್ಲಿ ತೇಜಸ್ವಿನಿಯ ಶಾಲಾ ಬ್ಯಾಗ್ ಹಾಗೂ ಪಠ್ಯಪುಸ್ತಕಗಳನ್ನು ಕಿತ್ತುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಕಣ್ಣೆದುರೇ ತನ್ನ ಪುಸ್ತಕಗಳು ಭಸ್ಮವಾಗುತ್ತಿರುವುದನ್ನು ಕಂಡ ಬಾಲಕಿ ಕಣ್ಣೀರಿಟ್ಟಿದ್ದಾಳೆ.

112ಕ್ಕೆ ಕರೆ: ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಘಟನೆ ಕಂಡ ಸ್ಥಳೀಯರು ಕೂಡಲೇ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸುಟ್ಟುಹೋದ ಪುಸ್ತಕಗಳನ್ನು ನೋಡಿ ಮರುಗಿದ್ದು, ಮಗಳ ಭವಿಷ್ಯಕ್ಕೆ ಕಂಟಕವಾಗಿದ್ದ ತಂದೆ ಚಿಕ್ಕಪ್ಪನಿಗೆ ಕಾನೂನು ರೀತಿಯಲ್ಲಿ ಬುದ್ಧಿವಾದ ಹೇಳಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣಕ್ಕೆ ಅಡ್ಡಿಯಾಗುವ ಯಾವುದೇ ಕೃತ್ಯವನ್ನು ಸಹಿಸಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.