ಅರಕಲಗೂಡು: ಹೊಗೆಸೊಪ್ಪು ಉತ್ಪಾದಿಸದೆ ಬ್ಯಾರಲ್ ಮನೆಯೂ ಇಲ್ಲದೆ ಶಾಸಕರು ನಿಯಮ ಬಾಹಿರವಾಗಿ ತಂಬಾಕು ಮಾರುಕಟ್ಟೆಯ ಪರವಾನಗಿ ಹೊಂದಿ ಅಕ್ರಮವಾಗಿ ಸರ್ಕಾರಿ ಸವಲತ್ತುಗಳನ್ನು ಪಡೆದು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಆರೋಪಿಸಿದರು.
ತಂಬಾಕು ಬೆಳೆಯುವ ರೈತರಿಗೆ ಹೊಗೆಸೊಪ್ಪು ಮಾರಾಟ ಮಾಡಲು ನಿಯಮಾನುಸಾರ ಪರವಾನಗಿ ನೀಡಲಾಗುತ್ತದೆ. ಆದರೆ ಶಾಸಕರು ಹೊಗೆಸೊಪ್ಪನ್ನು ಬೆಳೆಯುತ್ತಿಲ್ಲ, ಬ್ಯಾರಲ್ ಮನೆಯೂ ಇಲ್ಲ, ಇವರಿಗೆ ಕೊಣನೂರು ಹೋಬಳಿ ಹೊನಗನಹಳ್ಳಿ ಗ್ರಾಮದಲ್ಲಿ ಪರವಾನಗಿ ವಿತರಿಸಲಾಗಿದೆ. ಪರವಾನಗಿ ಹೆಸರಿನಲ್ಲಿ ಮಂಡಳಿಯಲ್ಲೂ ಸಹ ಅಧಿಕಾರ ಪಡೆದು ದುರುಪಯೋಗ ಪಡಿಸಿದ್ದಾರೆ. ಬ್ಯಾರಲ್ ಮನೆ ಇಲ್ಲದೆ ತಂಬಾಕು ಉತ್ಪಾದಿಸದೆ ಪರವಾನಗಿ ಹೊಂದುವುದು ಅಪರಾಧ. ಆದರೆ ಇಲ್ಲಿ ರೈತರಿಗೊಂದು ನಿಯಮವಾದರೆ ಶಾಸಕರಿಗೆ ಅದು ಅನ್ವಯಿಸುತ್ತಿಲ್ಲ ಎಂದು ಆರೋಪಿಸಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಶಾಸಕರು ಹೊಂದಿರುವ ಪರವಾನಗಿ ಚೀಟಿ ಪ್ರದರ್ಶಿಸಿದರು.
ತಾಲೂಕಿನ ಅಭಿವೃದ್ಧಿ ಕುರಿತು ಪ್ರಶ್ನಿಸಿದರೆ ನನ್ನ ವೈಯುಕ್ತಿಕ ಬದುಕಿನ ಕುರಿತು ಕುಟುಂಬಕ್ಕೆ ಕಳಂಕ ತರುವ ರೀತಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಶಾಸಕರು ಕೀಳು ಮಟ್ಟದ ರಾಜಕೀಯ ಮೆರೆದಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ರೂಪಿಸಿರುವ ಮಾಸ್ಟರ್ ಪ್ಲಾನ್ ೨೦೪೧ ರಲ್ಲಿ ೨೦೦ ಎಕರೆ ಪ್ರದೇಶವನ್ನು ಕೈಗಾರಿಕೆ ಪ್ರದೇಶಕ್ಕೆ ಮೀಸಲಿರಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಇದನ್ನು ಸಹಿಸದೆ ಶಾಸಕರು ನನ್ನನ್ನೆ ಗುರಿಯಾಗಿಸಿಕೊಂಡು ಸಲ್ಲದ ಆರೋಪ ಮಾಡಿದ್ದರು. ಇದರ ಕುರಿತು ಸುದ್ದಿ ಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಲ್ಲದೆ ತಾಲೂಕಿನ ಅಭಿವೃದ್ದಿ ಕಾರ್ಯಗಳ ಬಗ್ಗೆ ಪ್ರಶ್ನಿಸಿದ್ದೆ. ಇವರ ವೈಯುಕ್ತಿಕ ಬದುಕಿನ ಕುರಿತು ಮಾತನಾಡಿಲ್ಲ ಎಂದರು.










