ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಉತ್ತಮ ಆಡಳಿತ ನಡೆಯುತಿದ್ದು ಜನತೆಗೆ ಒಳ್ಳೆಯ ಯೋಜನೆಗಳು ಸಿಗುತ್ತಿವೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ಶಿವಶ್ರೀ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮಾಜಿ ಸಚಿವ ದಿ. ಎಚ್.ಸಿ. ಶ್ರೀಕಂಠಯ್ಯನವರ ೯೯ ನೇ ವರ್ಷದ ಜನ್ಮ ದಿನಾಚರಣೆ ಹಾಗೂ ಭಾನುವಾರ ಚನ್ನರಾಯಪಟ್ಟಣದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಯುವಪರ್ವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷವನ್ನು ಬಲಪಡಿಸಲು ಯುವ ಜನತೆ ಹೆಚ್ಚಾಗಿ ಕೆಲಸ ಮಾಡಬೇಕಿದೆ. ಈ ಉದ್ದೇಶದಿಂದ ತಾಲ್ಲೂಕಿನಲ್ಲಿ ಯುವಪರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನರು ಈಗ ಬುದ್ದಿವಂತರಾಗಿದ್ದಾರೆ. ರಾಜಕೀಯಕ್ಕಾಗಿ ಹೊಡೆದಾಡುವುದಿಲ್ಲ ಆದರೆ ಕೆಲಸ ಮಾಡುವವರನ್ನು ಗುರುತಿಸುತ್ತಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಯಂತೆ, ದಿಡಗ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಸಂಸದ ಶ್ರೇಯಸ್ ಪಟೇಲ್ ಈ ಯೋಜನೆ ಮಂಜೂರಾತಿಗೆ ಹೆಚ್ಚು ಕೆಲಸ ಮಾಡಿದ್ದಾರೆ. ಯುವಪರ್ವ ಕಾರ್ಯಕ್ರಮದ ಪ್ರಯುಕ್ತ ಬೃಹತ ಬೈಕ್ ರ‌್ಯಾಲಿ ಏರ್ಪಡಿಸಲಾಗಿದೆ. ಹಿರೀಸಾವೆ ಹೋಬಳಿಯಿಂದ ಹೆಚ್ಚು ಯುವಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಮಂಜೇಗೌಡ ಮಾತನಾಡಿ, ಯುವಪರ್ವ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರು ಭಾಗವಹಿಸುತ್ತಾರೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.










