ಚಿಕ್ಕಮಗಳೂರು: ದೇವಿರಮ್ಮ ಬೆಟ್ಟದಲ್ಲಿ ಭಕ್ತಸಾಗರ —ಮಳೆ, ಚಳಿ, ಜಾರುವ ನೆಲ ಲೆಕ್ಕಿಸದ ಕೈ ಕೈ ಹಿಡಿದು ನಡೆದರು- ನರಕ ಚತುರ್ದಶಿಗೆ ಮುನ್ನವೇ ದರ್ಶನದ ಸಂಭ್ರಮ

Chikkamagaluru: The Bindiga Deviramma fair in Mallenahalli of the taluk began on Sunday with the enthusiasm of devotees.

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ ಜಾತ್ರೆ ಭಾನುವಾರ ಭಕ್ತರ ಉತ್ಸಾಹದೊಂದಿಗೆ ಆರಂಭಗೊಂಡಿತು. ವರ್ಷಕ್ಕೊಮ್ಮೆ ಬೆಟ್ಟದ ತುದಿಯಲ್ಲಿ ದರ್ಶನ ನೀಡುವ ದೇವಿರಮ್ಮ ದೇವಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ದೇವಿರಮ್ಮ ಬೆಟ್ಟದತ್ತ ಹರಿದು ಬಂದರು.

ಕಲ್ಲು–ಮುಳ್ಳಿನ ಹಾದಿಯಲ್ಲಿ ಬರಿಗಾಲಿನಲ್ಲೇ ಸಾಗಿದ ಭಕ್ತರು ಬೆಟ್ಟ ಏರಿ ದೇವಿಯ ದರ್ಶನ ಪಡೆದ ಬಳಿಕ ಪುಳಕಿತರಾದರು. ನರಕ ಚತುರ್ದಶಿಯ ದಿನ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಇರುವುದರಿಂದ, ಹಿಂದಿನ ದಿನವೇ ರಾತ್ರಿಯಿಂದಲೇ ಭಕ್ತರು ಬೆಟ್ಟ ಏರುವ ಸಂಪ್ರದಾಯವಿತ್ತು. ಆದರೆ ಈ ಬಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಅಪಾಯ ತಪ್ಪಿಸಲು ರಾತ್ರಿ ವೇಳೆ ಬೆಟ್ಟ ಏರುವುದಕ್ಕೆ ಜಿಲ್ಲಾಡಳಿತ ಮತ್ತು ದೇವಾಲಯ ಸಮಿತಿಯು ನಿರ್ಬಂಧ ವಿಧಿಸಿತು.

ಹೀಗಾಗಿ ಭಾನುವಾರ ಬೆಳಿಗ್ಗೆಯಿಂದಲೇ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಯಿತು. ಶನಿವಾರ ರಾತ್ರಿ ಮಳೆ ಸುರಿದಿದ್ದರಿಂದ ಹಾದಿಯಲ್ಲಿ ಜಾರಿಕೆ ಹೆಚ್ಚಾಗಿದ್ದರೂ, ಭಕ್ತರು ಪರಸ್ಪರ ಸಹಕಾರದೊಂದಿಗೆ ಕೈ ಕೈ ಹಿಡಿದು ಬೆಟ್ಟ ಏರಿ ಭಕ್ತಿ ಪ್ರದರ್ಶಿಸಿದರು.

ಭಕ್ತರ ಸುರಕ್ಷತೆಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಟ್ಟದ ಹಲವು ಸ್ಥಳಗಳಲ್ಲಿ ನಿಯೋಜಿತರಾಗಿ ಹಗ್ಗದ ಸಹಾಯದಿಂದ ಏರಿಕೆಗೆ ನೆರವಾದರು.

ಜಾತ್ರಾ ಮಹೋತ್ಸವದ ಸಡಗರದಲ್ಲಿ ಮಲ್ಲೇನಹಳ್ಳಿ, ಬಿಂಡಿಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಟ್ಟದ ಪಾದಭಾಗದಲ್ಲಿರುವ ದೇವಿರಮ್ಮ ದೇಗುಲದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ಇತರ ಮಾರ್ಗಗಳಿಂದ ಇಳಿಯುವ ಭಕ್ತರಿಗೂ ಪ್ರಸಾದ ಲಭ್ಯವಾಗುವಂತೆ ದೇವಾಲಯ ಮಂಡಳಿ ವ್ಯವಸ್ಥೆ ಮಾಡಿದೆ.