ಚಿಕ್ಕಮಗಳೂರು : ಪತ್ನಿಯನ್ನು ಕಬ್ಬಿಣದ ಪೈಪಿನಿಂದ ಹೊಡೆದು ಕೊಂದ ಪಾಪಿ ಪತಿ

ಚಿಕ್ಕಮಗಳೂರು : ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ, ಪತಿ ತನ್ನ ಪತ್ನಿಯನ್ನು ಕಬ್ಬಿಣದ ಪೈಪಿನಿಂದ ಹೊಡೆದು ಕೊಂದು ಪರಾರಿಯಾದ ಘಟನೆ ನಡೆದಿದೆ.

ಮೃತಳನ್ನು ಮಂಜುಳ (32) ಎಂದು ಗುರುತಿಸಲಾಗಿದೆ. ಪತಿ-ಪತ್ನಿಯ ನಡುವೆ ನಿತ್ಯ ಜಗಳ ನಡೆಯುತ್ತಿದ್ದುದರಿಂದ ಆಕ್ರೋಶಗೊಂಡ ಪತಿ ಕೋಪದಲ್ಲಿ ಪತ್ನಿಯನ್ನು ಹಲ್ಲೆಗೈದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ರಕ್ತಸ್ರಾವದಿಂದ ಬಳಲುತ್ತಿದ್ದ ವೇಳೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಮಗುವಿನ ಎದುರೇ ತಾಯಿಯನ್ನೇ ಹೊಡೆದು ಕೊಂದಿರುವ ಪತಿಯ ಕ್ರೂರ ಕೃತ್ಯಕ್ಕೆ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ದಂಪತಿ ಯಮಗೊಂಡ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದರು. ನಿತ್ಯ ಜಗಳದಿಂದ ಬೇಸತ್ತ ತೋಟದ ರೈಟರ್ ಪತ್ನಿ-ಪತಿಯರಿಗೆ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಘಟನೆಯ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.