ಹಾಸನ: ಪೋಕ್ಸೋ ಕಾಯ್ದೆ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸುವಂತೆ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಪೋಕ್ಸೋ ಸಮಿತಿ ಮತ್ತು ಜಿಲ್ಲಾ ಮಟ್ಟದ ಬಾಲ ನ್ಯಾಯ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದರು.
ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದರ ಮೂಲಕ ಸಂಕಷ್ಟಕ್ಕೆ ಸಿಲುಕುವವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಲು ನಿರ್ದೇಶನ ನೀಡಿದರು.
ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಚಾರ ಆದರೆ ಜನರಲ್ಲಿ ಸ್ಪಲ್ಪ ಭಯ ಬರುತ್ತದೆ ಇಂತಹ ಪ್ರಕರಣ ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರಲ್ಲದೆ, ವೃತ್ತಿಗೆ ದ್ರೋಹ ಮಾಡಬಾರದು ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ಪ್ರಕರಣ ಕಡಿಮೆ ಮಾಡಲು ಎಲ್ಲರ ಪ್ರಯತ್ನ ಅತ್ಯಗತ್ಯ ಎಂದ ಅವರು ಸಾರ್ವಜನಿಕರಿಗೆ ಹೆಚ್ಚು ಹೆಚ್ಚು ಕಾನೂನಿನ ಅರಿವು ಮೂಡಿಸಿ ಎಂದು ತಿಳಿಸಿದರಲ್ಲದೆ, ಸುಶಿಕ್ಷಿತ ಸಂಸ್ಕಾರ, ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಇಲ್ಲವಾದಲ್ಲಿ ಮಕ್ಕಳಲ್ಲಿ ಅಪರಾಧದ ಸಂಖ್ಯೆ ಹೆಚ್ಚಳವಾಗುವುದು.
ಈ ಬಗ್ಗೆ ಪೋಷಕರು, ಶಿಕ್ಷಕರು, ಸಮುದಾಯ, ಸಮಾಜ ಎಲ್ಲರೂ ಒಂದಾಗಿ ಶ್ರಮಿಸಬೇಕು ಮತ್ತು ಮಕ್ಕಳಲ್ಲಿ ಅಪರಾಧಿ ಭಾವನೆ ಬೆಳೆಯದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಮಕ್ಕಳನ್ನು ನಾವು ಕೇವಲ ಶಿಕ್ಷಣವಂತರನ್ನಾಗಿ ಮಾಡುತ್ತಿದ್ದೇವೆ ಹೊರತು ಸಂಸ್ಕಾರವಂತರನ್ನಾಗಿ ರೂಪಿಸುತ್ತಿಲ್ಲ ಇದರ ಪರಿಣಾಮವೇ ಪೋಕ್ಸೋದಂತಹ ಹೀನ ಕೃತ್ಯಗಳು, ಅಪರಾಧಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನ ಮೇರೆಗೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಪೋಕ್ಸೋ ಸಮಿತಿ ಮತ್ತು ಬಾಲನ್ಯಾಯ ಸಮಿತಿ ರಚಿಸಲಾಗಿದೆ. ಅದರನ್ವಯ ಪ್ರತಿ ತಿಂಗಳು ಇದಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಡಿಸಿ, ಜಿಪಂ ಸಿಇಒ, ಎಸ್ಪಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸಮಗ್ರ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎಲ್ಲರ ಸಮನ್ವತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಅಧಿಕ ಜಿಲ್ಲಾ ನ್ಯಾಯಾಧೀಶ ದೇವರಾಜು ಹೆಚ್.ಎಂ., ಹಿರಿಯ ಸಿವಿಲ್ ನ್ಯಾಯಾಧೀಶ ಗಿರೀಗೌಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯರ್ಶಿ ದಾಕ್ಷಾಯಿಣಿ ಜಿ.ಕೆ ಮಾತನಾಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಿಲೀಪ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಮಧುಕುಮಾರಿ ಎಂ.ಎಸ್, ಕಾನೂನು ನೆರವು ಅಭಿರಕ್ಷಕರು ಮತ್ತು ಪ್ಯಾನಲ್ ವಕೀಲರು ಇದ್ದರು.







