ಚನ್ನರಾಯಪಟ್ಟಣ: ತಾಲ್ಲೂಕಿನ ಹೊನ್ನಮಾರನಹಳ್ಳಿ ಗ್ರಾಮದ ಶ್ರೀ ಶನೇಶ್ಚರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಛಟ್ಟಿ ಅಮಾವಾಸ್ಯೆ ಪ್ರಯುಕ್ತ ಬುಧವಾರ ಹೋಮ, ಪೂಜೆ ಮತ್ತು ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಹಿನ್ನೆಲೆಯಲ್ಲಿ ಮುಂಜಾನೆಯೇ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಲಂಕಾರ ಜಗಮಗಿಸುತ್ತಿದ್ದವು. ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಗೆ ಶನೇಶ್ವರಸ್ವಾಮಿ ಮೂಲ ಮೂರ್ತಿಗೆ ತೈಲಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ನಡೆಯಿತು. ನಂತರ ಗಣ ಹೋಮ, ನವಗ್ರಹ ಹೋಮ, ಶನಿ ಶಾಂತಿ ಹೋಮ ಕೈಗೊಂಡಿದ್ದು ದೇವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಡೆಯಿತು.

12 ಗಂಟೆಗೆ ರಾಜ ಸತ್ಯವ್ರತ ಕಥೆಯನ್ನು ಓದಲಾಯಿತು. ಚಿಟ್ಟಿ ಮೇಳದೊಂದಿಗೆ ಸಂಜೆ 4 ಗಂಟೆಗೆ ಶನೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸಂಜೆ 6 ಗಂಟೆಗೆ ಭಕ್ತರು ದೇವಸ್ಥಾನದ ಸುತ್ತ ದೀಪಗಳನ್ನು ಇಟ್ಟು ಬೆಳಗಿದರು. ಕೆಲವು ಭಕ್ತರು ವಿಶೇಷವಾಗಿ ಬೂದು ಕುಂಬಳ ಕಾಯಿ ಮೇಲೆ ದೀಪವನ್ನು ಹಚ್ಚಿಕೊಂಡು, ನವಗ್ರಹ ಮತ್ತು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರು.
ರಾತ್ರಿ 8 ಗಂಟಗೆ ಭಕ್ತರಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನುಗ್ಗೇಹಳ್ಳಿಯ ಪುರವರ್ಗದ ಹಿರೆಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಜಿಲ್ಲೆಯ ಪಾಲಕೆರಿ ಮಠದ ನಾಗರಾಜು ಸ್ವಾಮೀಜಿ, ಆದಿಚುಂಚನ ಗಿರಿ ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು










