ಚನ್ನರಾಯಪಟ್ಟಣ: ಫೆ.01 ರಂದು ಹಿಂದೂ ಸಮಾಜೋತ್ಸವ ಸಭಾ ಕಾರ್ಯಕ್ರಮ ಮತ್ತು ಶೋಭಾಯಾತ್ರೆ

ಚನ್ನರಾಯಪಟ್ಟಣ: ದೇಶದ ಹಿಂದೂಗಳ ಜಾಗೃತಿಗಾಗಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಆಚರಣೆಯ ಅಂಗವಾಗಿ ತಾಲ್ಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯ ವತಿಯಿಂದ ಫೆ.01 ರಂದು ಹಿಂದೂ ಸಮಾಜೋತ್ಸವ ಸಭಾ ಕಾರ್ಯಕ್ರಮ ಮತ್ತು ಶೋಭಾಯಾತ್ರೆಯನ್ನು ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಊಕು ಸಮಿತಿ ಅಧ್ಯಕ್ಷ ಶಿವಶಂಕರ್ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿ,
ದೇಶ ಪ್ರೇಮ, ಸನಾತನ ಪರಂಪರೆ ಹಾಗೂ ಭಾರತೀಯತೆಯ ಅಸ್ಮಿತೆಗಳನ್ನು ಉಳಿಸಿ ಬೆಳಸುವ ಧ್ಯೇಯದಿಂದ ಪ್ರಾರಂಭಗೊಂಡ ಈ ಸಂಘಟನೆಗೆ ಈಗ ನೂರು ವರ್ಷಗಳು ಕಳೆದಿದೆ ಎಂದರು.

ಪ್ರಸಕ್ತ ಸಂದರ್ಭದ ಹಾಗೂ ಮುಂದಿನ ತಲೆಮಾರಿನ ಸುರಕ್ಷತೆ ಹಾಗೂ ನೆಮ್ಮದಿಯ ಬಾಳಿಗಾಗಿ ಹಿಂದೂಗಳಲ್ಲಿ ಸಂಘಟನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂದು ಬೆಳಗ್ಗೆ 09 ಗಂಟೆಗೆ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗೋಪೂಜೆ, ಸಪ್ತನದಿಗಳ ತೀರ್ಥ ವಿತರಣೆ ನಂತರ ಶ್ರೀರಾಮತಾರಕ ಹೋಮ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ತಿಳಿಸಿದರು.

ಬೃಹತ್ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ
ಹಿಂದೂ ಧರ್ಮದ ಉಳಿವು, ಮೌಲ್ಯತೆಯ ಜಾಗೃತಿ ಹೆಚ್ಚಿಸುವ ಸಲುವಾಗಿ ಸಮಾಜೋತ್ಸವ ಆಯೋಜಿಸಿಲಾಗಿದೆ. ಮಧ್ಯಾಹ್ನ 3. ಗಂಟೆಗೆ ಸಮಾಜೋತ್ಸವ ಕಾರ್ಯಕ್ರಮದ ಅಂಗವಾಗಿ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶೋಭಯಾತ್ರೆ ಆರಂಭವಾಗಿ ಕೃಷ್ಣರಾಜೇಂದ್ರ ವೃತ್ತ, ನವೋದಯ ವೃತ್ತದ ಮುಖಾಂತರ ಮೈಸೂರು ರಸ್ತೆಯಲ್ಲಿ ಸಾಗಿ ಆಸ್ಪತ್ರೆ ವೃತ್ತದ ಮಾರ್ಗವಾಗಿ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತ್ಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಈ ಶೋಭಾಯಾತ್ರೆಯ ಬಳಿಕ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ದಿವ್ಯ ಸಾನಿಧ್ಯ ಮತ್ತು ಆಶೀರ್ವಚನ ನೀಡಲಿದ್ದಾರೆ.

ತಾಲೂಕಿನ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಗೋವಿಂದ ಜೀ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಸಮಾಜೋತ್ಸವದ ಸಭಾ ಕಾರ್ಯಕ್ರಮದಲ್ಲಿ 2500ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮಿಯರು ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆರ್ ಎಸ್ ಎಸ್ ಮುಖಂಡ ಸಿ.ಎಸ್. ಮನೋಹರ್, ಹಿಂದೂ ಸಮಾಜೋತ್ಸವ ಸ್ಥಾಯಿ ಸಮಿತಿಯ ಸಹ ಸಂಯೋಜಕ ಸಿ.ಎಂ.ರೂಪ ಮನೋಹರ್ ಸಮಿತಿಯ ಸದಸ್ಯರಾದ ಜಾನಕಿ ರವೀಂದ್ರ ಕುಮಾರ್, ರೂಪ ಸಂತೋಷ್, ಡಾ.ಶೇಷಶಯನ, ಮೋಹನ್, ಆನಂದ್ ಭಾಗವಹಿಸಿದ್ದರು.