ಚನ್ನರಾಯಪಟ್ಟಣ : ಕಣ್ಮರೆಗೆ ಸರಿದ ಒಕ್ಕಣೆಯ ರೋಣಗಲ್ಲು

ಚನ್ನರಾಯಪಟ್ಟಣ: ಪೂರ್ವ ಕಾಲದಿಂದಲೂ ರಾಗಿ, ಭತ್ತ ಹಾಗೂ ಇತರೆ ಧಾನ್ಯಗಳನ್ನು ಒಕ್ಕಣೆ ಮಾಡಲು ಬಳಸುತ್ತಿದ್ದ ರೋಣಗಲ್ಲು (ರೋಣ ಕಲ್ಲು) ಪ್ರಸ್ತುತ ದಿನಗಳಲ್ಲಿ ಕಣ್ಮರೆಗೆ ಸರಿದಿದೆ.

ನಮ್ಮ ಪೂರ್ವಜರು ಮೂಲ ಕೃಷಿ ಪದ್ಧತಿ ಅನುಸರಿಸಿಕೊಂಡಿದ್ದ ವೇಳೆ ಪ್ರತಿ ಮನೆಗೆ ಒಂದರಂತೆ ರೋಣ ಗಲ್ಲು ಇರುತ್ತಿದ್ದದ್ದು ವಿಶೇಷ. ಆದರೆ ಇತ್ತೀಚಿನ ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯ ನಂತರ ಕಣ್ಮರೆಗೆ ಸರಿದಿರುವುದನ್ನು ಕಾಣಬಹುದಾಗಿದೆ.

ಜಮೀನಿನ ಬದುವಿನಲ್ಲಿ ರೋಣಗಲ್ಲುವೊಂದನ್ನು ನಿಲ್ಲಿಸಲಾಗಿದೆ ಎಂದರೆ ಆತ ಜಮೀನುದಾರ ಎಂದರ್ಥ. ಹೆಚ್ಚು ಕೃಷಿ ಜಮೀನು ಹೊಂದಿದ್ದು ಸಾಕಷ್ಟು ರಾಗಿ ಹಾಗೂ ಇತರೆ ಧಾನ್ಯಗಳನ್ನು ಬೆಳೆಯಲಿದ್ದಾನೆ ಎಂಬುದಕ್ಕೆ ರೋಣ ಕಲ್ಲು ಒಂದು ಸಾಕ್ಷಿಯಾಗಿರುತಿತ್ತು.

ಜೊತೆಗೆ ಅಂತಹ ದೊಡ್ಡದಾದ ರೋಣಗಲ್ಲನ್ನು ಎಳೆಯಬೇಕೆಂದರೆ ಅಥವಾ ಒಕ್ಕಣೆ ಕಾರ್ಯದಲ್ಲಿ ಬಳಸಬೇಕೆಂದರೆ ಅದಕ್ಕೆ ಅನುಗುಣವಾದ ಸಾಮರ್ಥ್ಯ ಹೊಂದಿರುವ ಎತ್ತುಗಳನ್ನು ಕಟ್ಟಿರುತ್ತಾನೆ ಎಂಬುದು ಖಚಿತವಾಗುತ್ತಿತ್ತು.

ಆದರೆ, ಇತ್ತೀಚಿನ ದಿನಗಳಲ್ಲಿ ಅಂತಹ ರೋಣ ಕಲ್ಲು ಎಂಬ ಸಾಧನವನ್ನು ಹುಡುಕಿದರೂ ಸಹ ಸಿಗುವುದು ಅಪರೂಪವಾಗುತ್ತಿದೆ. ಅದರ ಬಳಕೆ ಕಡಿಮೆಯಾದಂತೆಲ್ಲ ಅವುಗಳನ್ನು ಒಡೆದು ತುಂಡರಿಸಿ ತಳಹದಿಗೆ ಹಾಕುವುದು, ಜಮೀನಿನ ಹಳ್ಳದ ಬದಿಗೆ ಅಣೆಕಟ್ಟು ನಿರ್ಮಿಸಲು ಇಲ್ಲವೇ ಹಳ್ಳ-ಗುಂಡಿ ಪ್ರದೇಶಕ್ಕೆ ತಳ್ಳಿ ಬಿಡಲಾಗುತ್ತಿದೆ ಎನ್ನಲಾಗಿದೆ.

ಕಳೆದ 10-15 ವರ್ಷಗಳ ಹಿಂದೆ ರಾಗಿ, ಭಕ್ತ ಕಟಾವು ಕಾರ್ಯ ಮುಗಿದ ನಂತರ ಸಮ್ಮದಟ್ಟಾದ ಜಾಗದಲ್ಲಿ ಒಕ್ಕಣೆ ಸಲುವಾಗಿ ಗುದ್ದಲಿಗಳಿಂದ ಕೆತ್ತಿ ನೆಲ ಸಮ್ಮದಟ್ಟುಗೊಳಿಸಿ ತಪ್ಪೆಯ ಬಗಡ ಹಾಕಿ ಸಾರಿಸಿ ಕಣ ಸಿದ್ಧಪಡಿಸುತ್ತಿದ್ದರು.

ನಂತರದ ದಿನಗಳಲ್ಲಿ ಕಣದಲ್ಲಿ ತೆನೆ ಸಹಿತ ರಾಗಿ ಹುಲ್ಲನ್ನು ಹರಡಿ ಬಲವಾದ ಎತ್ತುಗಳ ಸಹಾಯದಿಂದ ರೋಣಗಲ್ಲನ್ನು ಎಳೆಸುವ ಮೂಲಕ ಒಕ್ಕಣೆ ಕಾರ್ಯವನ್ನು ಮಾಡುತ್ತಿದ್ದರು. ಇದರಿಂದ ರಾಗಿ, ಭಕ್ತ ಹಾಗೂ ಇತರೆ ಧಾನ್ಯಗಳು ಕಲ್ಲು, ಮಣ್ಣು, ಮಸಿ ಇಲ್ಲದಂತೆ ಶುದ್ಧಗೊಳಿಸಿ ಚೀಲಗಳಲ್ಲಿ ಅಥವಾ ಕಣಜಗಳಿಗೆ ತುಂಬಿ ಸಂಗ್ರಹಿಸುತ್ತಿದ್ದರು.

ಒಕ್ಕಣೆ ಸಮಯದಲ್ಲಿ ರೋಣ ಗಲ್ಲನ್ನು ಹೊಂದಿಲ್ಲದಿದ್ದರೆ ದವಸ ಧಾನ್ಯಗಳನ್ನು ಒಕ್ಕಣೆಗೂಳಿಸಿ ಮನೆಗೆ ಸಾಗಿಸಲು ಸಾಧ್ಯವಾಗದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಆಧುನಿಕ ಯಂತ್ರೋಪಕರಣಗಳು ಬಂದಮೇಲೆ ರೋಣಗಲ್ಲಿನತ್ತ ತಿರುಗಿ ನೋಡುವವರು ಇಲ್ಲದಾಗಿದೆ.

ಇತ್ತೀಚಿನ ವರ್ಷಗಳಿಂದ ರಾಗಿ ಕಟಾವು ಯಂತ್ರ ಕಾಲಿಟ್ಟ ಬಳಿಕ ರಾಗಿ ಹಾಗೂ ಭಕ್ತ ಕಟಾವು ಕಾರ್ಯ, ಹೊರೆ ಕಟ್ಟುವುದು, ಬೀಸಿಗೆ ಹಾಕುವುದು ಹಾಗೂ ಕಣಮಾಡಿ ಒಕ್ಕಣೆ ಮಾಡುವುದು ತಪ್ಪಿದೆ. ಎಲ್ಲಾ ಕೆಲಸವನ್ನು ಯಂತ್ರವೇ ಮಾಡಲಿದ್ದು ಕೈಯಲ್ಲಿ ಹಣ ಇದ್ದರೆ ಸಾಕು ಕೃಷಿ ಚಟುವಟಿಕೆ ಸುಲಭವಾಗಲಿದೆ ಎಂದು ರೈತ ರಾಮೇಗೌಡ ತಿಳಿಸಿದರು.

ಇಂದು ನಾವುಗಳು ವಾಹನಗಳನ್ನು ಖರೀದಿಸಲು ಅಥವಾ ನೋಡಲು ಶೋ ರೂಮ್ ಗಳಿಗೆ ಹೋಗುತ್ತಿದ್ದೇವೆ. ಹಿಂದೆ ನಮ್ಮ ಪೂರ್ವಜರು ರೋಣಗಲ್ಲು ಹಾಗೂ ಎತ್ತಿನ ಗಾಡಿಗಳನ್ನು ಖರೀದಿಸಿ ತರಲು ಮಂಡ್ಯ, ತುಮಕೂರು, ರಾಮನಗರ ಹಾಗೂ ವಿವಿದೆಡೆಗೆ ನಡೆದು ಸಾಗುತ್ತಿದ್ದರು. ಬೆವರು ಸುರಿಸಿ ದುಡಿದ ಹಣದಲ್ಲಿ ಅವುಗಳನ್ನು ಖರೀದಿಸಿ ತಂದು ಕೃಷಿ ಚಟುವಟಿಕೆಯಲ್ಲಿ ತೊಡಗುವುದೇ ಸಂತಸದ ವಿಚಾರವಾಗಿತ್ತು.

ಹಿಂದೆ ಹತ್ತಾರು ಕುಟುಂಬಗಳು ಸೇರಿ ಒಂದೆಡೆ ಕಣ ನಿರ್ಮಿಸಿ ಒಕ್ಕಣೆ ಕಾರ್ಯದಲ್ಲಿ ತಿಂಗಳುಗಟ್ಟಲೆ ತೊಡಗಿಕೊಳ್ಳುತ್ತಿದ್ದರು. ಶ್ರಮವಹಿಸಿ ಬೆವರು ಸುರಿಸಿ ಕೆಲಸ ಮಾಡುತ್ತಿದ್ದರಿಂದ ಆರೋಗ್ಯವಂತರಾಗಿದ್ದರು.

ಆದರೆ ಕೃಷಿ ಚಟುವಟಿಕೆಯಲ್ಲಿ ಯಂತ್ರೋಪಕರಣಗಳು ಬಂದ ನಂತರ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಬದಲಾದ ಹಿನ್ನೆಲೆ ಪ್ರಸ್ತುತ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲಬೇಕಾದ ಅನಿವಾರ್ಯತೆ ಎದುರಾಗಿದೆ.

ಜಮೀನಿನಲ್ಲಿ ರೋಣಗಲ್ಲು ಇಲ್ಲದಿದ್ದರೂ ಮನೆಗಳಲ್ಲಿ ಟೇಬಲ್ ಮೇಲೆ ಸಾಕಷ್ಟು ಮಾತ್ರೆಗಳು ಇರುವುದನ್ನು ಕಾಣಬಹುದಾಗಿದೆ ಎಂದು ಯುವರೈತ ಮಲ್ಲಿಕಾರ್ಜುನ ಕಳವಳ ವ್ಯಕ್ತಪಡಿಸಿದರು.

ಇಂದಿನ ಪೀಳಿಗೆಗೆ ರೋಣಗಲ್ಲು ಇದೆ ಎಂಬುದೇ ತಿಳಿದಿರುವುದಿಲ್ಲ ಎಂಬುದೇ ವಿಪರ್ಯಾಸದ ಸಂಗತಿಯಾಗಿದೆ. ಸದ್ಯಕ್ಕೆ ವಸ್ತು ಪ್ರದರ್ಶನ ಅಥವಾ ವಸ್ತು ಸಂಗ್ರಹಾಲಯಗಳು ರೋಣಗಲ್ಲನ್ನು ಪ್ರದರ್ಶನಕ್ಕೆ ಇಡಬೇಕಾದ ದಿನಗಳು ಹತ್ತಿರವಾಗುತ್ತಿವೆ ಎಂಬುದು ಹಿರಿಯರ ಮಾತಾಗಿದೆ.

ರೋಣ ಗಲ್ಲು ಎಂಬ ಪದ ಸದ್ಯ ಇಂದಿನ ಯುವಪೀಳಿಗೆಗೆ ತಿಳಿದಿರಲು ಸಾಧ್ಯವಿಲ್ಲ. ರೈತನ ಒಕ್ಕಣೆ ಕಾರ್ಯದಲ್ಲಿ ಹೆಚ್ಚು ಸಹಕಾರಿಯಾಗುತ್ತಿದ್ದ ಯಂತ್ರ ಎಂದರೆ ತಪ್ಪಾಗಲಾರದು. ಆದರೆ ಕೃಷಿ ಚಟುವಟಿಕೆಯಲ್ಲಿ ಯಂತ್ರೋಪಕರಣಗಳು ಪಾದರ್ಪಣೆ ಮಾಡಿದ ಬಳಿಕ ರೋಣಗಲ್ಲು ಸೇರಿದಂತೆ ಬಹುತೇಕ ಉಪಕರಣಗಳು ಕಣ್ಮರೆಗೆ ಸರಿಯುತ್ತಿವೆ.

ಮುಂದಿನ ದಿನಗಳಲ್ಲಿ ಮಕ್ಕಳಿಗೆ ವಸ್ತು ಪ್ರದರ್ಶನ ಇಲ್ಲವೇ ಪ್ರಾಚೀನ ವಸ್ತು ಸಂಗ್ರಹಾಲಯ ಗಳಲ್ಲಿ ರೋಣಗಲ್ಲನ್ನು ತೋರಿಸಬೇಕಾದ ದಿನ ಬರಲಿದೆ.