14.2 C
Munich
Home Uncategorized ಚನ್ನರಾಯಪಟ್ಟಣ: ಕಬ್ಬಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ‌ ಚುಂಚಶ್ರೀ

ಚನ್ನರಾಯಪಟ್ಟಣ: ಕಬ್ಬಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ‌ ಚುಂಚಶ್ರೀ

ಚನ್ನರಾಯಪಟ್ಟಣ: ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಧರ್ಮ ದ್ವಜಾರೋಹಣ ನೆರವೇರಿಸುವ ಮೂಲಕ ಶ್ರೀ ಬಸವೇಶ್ವರಸ್ವಾಮಿಯ ವೈಭವದ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಿದರು.

ಶನಿವಾರ ಬೆಳಗ್ಗೆ 8.30 ರಲ್ಲಿ ಕಬ್ಬಳಿ ಗ್ರಾಮಕ್ಕೆ ಆಗಮಿಸಿದ ಚುಂಚಶ್ರೀಗಳನ್ನು ಗ್ರಾಮಸ್ಥರು ಹಾಗೂ ಭಕ್ತರು ಪಾದಪೂಜೆ ಮಾಡಿ ಮಂಗಳ ವಾದ್ಯದೊಂದಿಗೆ ಸ್ವಾಗತಿಸಿದರು.

ಸ್ವಾಮೀಜಿ, ಶ್ರೀ ಬಸವೇಶ್ವರ ಸ್ವಾಮಿಯ ಮೆರೆವಿಗ್ರಹ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ಮಾಡುವ ಮೂಲಕ ಶ್ರೀಕ್ಷೇತ್ರದಲ್ಲಿರುವ ಮೂಲ ದೇಗುಲಕ್ಕೆ ಕರೆತರಲಾಯಿತು.

ವಿಘ್ನೇಶ್ವರ ಹಾಗೂ ಗೋಪೂಜೆ ನಂತರ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಹಿಂಭಾಗದಲ್ಲಿರುವ ನಂದಿ ವಿಗ್ರಹಕ್ಕೆ ಕ್ಷೀರಾಭಿಷೇಕ ನೆರವೇರಿಸಲಾಯಿತು.

ದೇಗುಲದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಗಂಗಾ ಪೂಜೆ ನೆರವೇರಿಸಿದ ಚುಂಚಶ್ರೀಗಳು ಗರುಡಗಂಬದ ಮೇಲಿರುವ ದೀಪವನ್ನು ಬೆಳಗಿಸಿ ಧರ್ಮ ಧ್ವಜಾರೋಹಣ ಕಾರ್ಯ ನೆರವೇರಿಸಿದರು. ಭಕ್ತರಿಗೆ ಸಿಹಿ ಹಾಗೂ ಪ್ರಸಾದ ನೀಡಿದರು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗುಡಿಗೌಡ ಪ್ರಕಾಶ್, ಗ್ರಾಮದ ಮುಖಂಡರು ಹಾಗೂ ಕಬ್ಬಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.

error: Content is protected !!