ಚನ್ನರಾಯಪಟ್ಟಣ :ದೇಶಿ ತಳಿಯ ಜಾನುವಾರಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ರೈತರನ್ನು ಪ್ರೋತ್ಸಾಹಿಸಬೇಕೆಂದ ಶಾಸಕ ಸಿ.ಎನ್. ಬಾಲಕೃಷ್ಣ

ಚನ್ನರಾಯಪಟ್ಟಣ : ಪಟ್ಟಣದ ಪುರಸಭಾ ಮುಂಭಾಗದಲ್ಲಿ ಶುಕ್ರವಾರ ಇತಿಹಾಸ ಪ್ರಸಿದ್ಧ ಚಂದ್ರಮೌಳೇಶ್ವರ ರಥೋತ್ಸವದ ಅಂಗವಾಗಿ 87ನೇ ಭಾರಿ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿ, ಆಧುನಿಕ ಕೃಷಿ ಪದ್ಧತಿಯಿಂದ ಹಳ್ಳಿಗಳಲ್ಲಿ ದನಗಳನ್ಮು ಸಾಕು ವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.

ಹಿಂದಿನ ಕಾಲದಲ್ಲಿ ಉಳುಮೆ ಮಾಡಲು ಪ್ರತಿ ರೈತರ ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ಜೋಡಿ ಎತ್ತುಗಳು ಇರುತ್ತಿದ್ದವು. ಆದರೆ ಇಂದು ಉಳುಮೆ ಮಾಡುವ ರೈತರೇ ಇಲ್ಲವಾಗಿದರೆ. ನೇಗಿಲ ಯೋಗಿಗಳ ಅಭಾವದಿಂದ ರೈತರು ಈಗ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಂತಾಗಿದೆ. ಹೈನುಗಾರಿಕೆ ಮಾಡುವ ಉದ್ದೇಶದಿಂದ ಸಾಕಿರುವ ಹಸುಗಳನ್ನು ಬಿಟ್ಟರೆ ಹಳ್ಳಿಗಳಲ್ಲಿ ನಾಟಿ ರಾಸುಗಳೇ ಇಲ್ಲವಾಗಿವೆ ಎಂದು ತಿಳಿಸಿದರು.

ಹಸುಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು, ದೇಸಿತಳಿ ರಾಸುಗಳ ರಕ್ಷಣೆ ಕೇವಲ ಉಳುಮೆ ಮಾಡಲು ಅಲ್ಲ ಅದೊಂದು ಸೇವೆ ಹಾಗೂ ಇದನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ. ನಮ್ಮ ಕಾಲಕ್ಕೇ ದೇಸಿ ರಾಸುಗಳ ಹಲವು ತಳಿಗಳು ನಶಿಸುವ ಹಂತ ತಲುಪಿವೆ. ಈಗಲಾದರೂ ನಾವು ಎಚ್ಚೆತ್ತು ದೇಸಿತಳಿ ರಾಸುಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕರೋನ ಹಾಗೂ ಗಂಟುರೋಗ ಮತ್ತು ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ಏಳು ವರ್ಷಗಳಿಂದ ಸ್ಥಗಿತಗೊಳಿಸಿದ ದನಗಳ ಜಾತ್ರೆಯನ್ನು ರೈತ ಮುಖಂಡರ ಮನವಿಯಂತೆ ಪುರಸಭೆ ವತಿಯಿಂದ ಜಾತ್ರೆಗೆ ಕಳೆದ ವರ್ಷದಿಂದ ಚಾಲನೆ ನೀಡಲಾಗಿದೆ ದನಗಳ ಜಾತ್ರೆ ಈ ಬಾರಿ ಸಣ್ಣ ಪ್ರಮಾಣದಲ್ಲಾದರೂ ಮುಂದಿನ ಬಾರಿ ಎಲ್ಲಾ ರೈತರ ಸಹಕಾರದೊಂದಿಗೆ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುವುದು.

ಎಪಿಎಂಸಿ ಆವರಣದಲ್ಲಿ ದನಗಳ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ವಿದ್ಯುತ್ ದೀಪ ರಾಸುಗಳಿಗೆ ಕುಡಿಯುವ ನೀರು, ಮೇವು, ಶುಚಿತ್ವ ಸೇರಿದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಭದ್ರತೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇಂದಿನಿಂದ ಫೆ.13ರ ವರೆಗೆ ಧನಗಳ ಜಾತ್ರೆ ನಡೆಯಲಿದ್ದು, ಬೇರೆ ಜಿಲ್ಲೆಗಳಿಂದಲೂ ದನಗಳ ಆಗಮನವಾಗಿದ್ದು, ಉತ್ತಮವಾದ ರಾಸುಗಳಿಗೆ ಎಪಿಎಂಸಿ ಮತ್ತು ಪುರಸಭೆ ವತಿಯಿಂದ ಆಯ್ಕೆ ತಂಡ ಸೂಚಿಸಿದ 18 ಜೋಡಿಗಳಿಗೆ ಬಹುಮಾನಗಳನ್ನು ನೀಡಲಾಗುವುದು. ಫೆ.13ರಂದು ಎಪಿಎಂಸಿ ಆವರಣದ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದೆಂದು ತಿಳಿಸಿದರು.

ಪುರಸಭಾ ಮುಂಭಾಗದಿಂದ ಆರಂಭಗೊಂಡ ರಾಸುಗಳ ಮೆರವಣಿಗೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿದಂತೆ ಗಣ್ಯರು ಗೋಪೂಜೆ ಸಲ್ಲಿಸಿ ಚಾಲನೆ ನೀಡಿದರು.ಮಂಗಳ ವಾದ್ಯದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಸುಗಳ ಮೆರವಣಿಗೆ ನಡೆಸಿ, ಎಪಿಎಂಸಿ ಆವರಣದಲ್ಲಿ ದನಗಳ ಜಾತ್ರೆ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ಹಾಸನ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ರೈತರು ತಮ್ಮ ರಾಸುಗಳನ್ನು ಕರೆತಂದು ರಾಸುಗಳ ಕೊಂಬಿಗೆ ಹೂವಗಳನ್ನು ಕಟ್ಟಿ ಸಿಂಗರಿಸಲಾಗಿತು.

ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಸಿ.ಎನ್. ಮೋಹನ್ ಮುಖ್ಯಾಧಿಕಾರಿ ಆರ್‌. ಯತೀಶ್ ಕುಮಾರ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಟಿಎಪಿಸಿಎಂಎಸ್‌ನ ಅಧ್ಯಕ್ಷ ವೆಂಕಟೇಶಮೂರ್ತಿ, ನಿರ್ದೇಶಕ ಎಂ.ಆರ್.ಅನಿಲ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್, ರೈತ ಸಂಘದ ಅಧ್ಯಕ್ಷ ರವಿಗೌಡಯ್ಯ, ಮುಖಂಡರಾದ ರವಿ, ಗಾರೆಕೃಷ್ಣ , ಎಪಿಎಂಸಿ ಹಾಗೂ ಪುರಸಭಾ, ಪಶು ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.