ಚನ್ನರಾಯಪಟ್ಟಣ: ಬೆಂಗಳೂರಿನಿಂದ ಕಾರ್ಯನಿಮಿತ್ತ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು ತಾಲ್ಲೂಕಿನ ಹಿರೀಸಾವೆ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳು ಹಾಗೂ ಕಾಂಗ್ರೆಸ್ ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಬಳಿಕ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಮಾತನಾಡಿ, ನಿಮ್ಮೆಲ್ಲರ ಬೇಡಿಕೆಯಂತೆ ಹಿರೀಸಾವೆಯ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಸಲುವಾಗಿ ಶಂಕುಸ್ಥಾಪನೆಗೆ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದರು.
ಇನ್ನು ಹಿರೀಸಾವೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರದಿಂದ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಗುಣಮಟ್ಟದ ಕಾಮಗಾರಿ ಹಾಗೂ ಹೆಚ್ಚಿನ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ವಿವಿಧಡೆ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಪುತ್ತಳಿ ಹಾಗೂ ಭವನಗಳ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ನಿರ್ಮಾಣ ಕಾರ್ಯವು ಪ್ರಗತಿಯಲ್ಲಿ ಸಾಗುತ್ತಿದ್ದು ವರ್ಷಾಂತ್ಯದಲ್ಲಿ ಲೋಕಾರ್ಪಣೆಗೊಳ್ಳಲಿವೆ ಎಂದು ತಿಳಿಸಿದರು.
ಜಿ.ಪರಮೇಶ್ವರ್ ಯುವಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮೌರ್ಯ, ಸಾಮಾಜಿಕ ಹೋರಾಟಗಾರ ಹೊಸಹಳ್ಳಿ ಅಣ್ಣಯ್ಯ, ಕಾಂಗ್ರೆಸ್ ಮುಖಂಡರಾದ ಉದಯಕುಮಾರ್, ಮಹೇಶ್, ದಲಿತಪರ ಸಂಘಟನೆಗಳ ಮುಖ್ಯಸ್ಥರು, ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇತರರು ಇದ್ದರು. ಹಿರೀಸಾವೆ ಪೊಲೀಸರು ಬಿಗಿಭದ್ರತೆ ಒದಗಿಸಿದ್ದರು.










