ಚನ್ನರಾಯಪಟ್ಟಣ: ಸುತ್ತಲಿನ ಸಮಾಜ ಹಾಗೂ ತನ್ನ ಬದುಕಿನ ಬಗ್ಗೆ ಸದಾ ಚಿಂತನೆ ಮಾಡುವ ವ್ಯಕ್ತಿಯು ಅನ್ಯರಿಗೆ ಎಂದಿಗೂ ಕೇಡು ಬಯಸುವುದಿಲ್ಲ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಪುರಾಣ ಪ್ರಸಿದ್ಧ ಕುಂದೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಶ್ರೀ ಮೆಳಿಯಮ್ಮ ದೇವಿಗೆ ಅಲಂಕಾರ, ಹೋಮ-ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೇರವೇರಿಸಿ, ಆತ್ಮ ಪರಿಶುದ್ಧವಾಗಿದ್ದರೆ ಬದುಕು ಸುಂದರವಾಗಿರುತ್ತದೆ ಎಂದು ಆಶಿರ್ವಚನ ನೀಡಿದರು.
ಒಳ್ಳೆಯ ಕೆಲಸ-ಕಾರ್ಯಗಳನ್ನು ಮಾಡಿ ನಾಲ್ಕು ಜನರ ಸ್ನೇಹ ಸಂಪಾದಿಸಿದರೆ ಬದುಕಿನುದ್ದಕ್ಕೂ ಜೊತೆ ಬರಲಿದ್ದಾರೆ. ಜೊತೆಗೆ ಧರ್ಮ ಕಾರ್ಯಗಳಲ್ಲಿ ತೊಡಗಿ ಪುಣ್ಯ ಗಳಿಸಿದರೆ ಕಾಲದ ನಂತರವೂ ಸ್ವರ್ಗದ ಬಾಗಿಲ ವರೆಗೂ ಹಿಂಬಾಲಿಸಲಿದೆ. ಇದರಿಂದ ಬದುಕು ಮುಕ್ತಿ ಹೊಂದಲಿದೆ ಎಂದರು.
ಮನೆಯನ್ನು ಬೆಳಗಿಸಬೇಕೆಂದೇ ದೀಪ ಅಂಟಿಸಿದರೆ ಅದು ಸದಾ ಪ್ರಜ್ವಲಿಸಲಿದೆ. ಅದನ್ನೇ ಕೆಡುಕಿಗಾಗಿ ಬಳಸಿದರೆ ಕೆನ್ನಾಲಿಗೆ ಚಾಚಿ ಮನೆಯನ್ನೇ ಆಹುತಿ ಪಡೆಯಲಿದೆ. ಹಾಗೆಯೇ ಮನುಷ್ಯ ತನ್ನ ಬದುಕನ್ನು ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟರೆ ನಿಮ್ಮ ಹೆಸರು ಚಿರವಾಗಿ ಉಳಿಯಲಿದೆ. ಆದರೆ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡರೆ ಬದುಕು ನಿಂತ ನೀರಾಗಲಿದೆ ಎಂದು ಎಚ್ಚರಿಸಿದರು.
ಅಮಾವಾಸ್ಯೆ ವ್ರತದ ಹಿನ್ನೆಲೆ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಮ್ಮನವರಿಗೆ ವಿಶೇಷ ಅಲಂಕಾರ ಜರಗಿದ್ದು ಹೋಮ, ಹವನ ಹಾಗೂ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಶ್ರೀಗಳು ನೆರವೇರಿಸಿದರು. ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.










