ಚಿಕ್ಕಮಗಳೂರು: ರಾಹುಲ್ ಗಾಂಧಿಯ ಮತಗಳ್ಳತನ ಆರೋಪಕ್ಕೆ ಸಿ.ಟಿ.ರವಿ ಕಿಡಿ, ಕಾಂಗ್ರೆಸ್‌ಗೆ ಚುನಾವಣಾ ಅಕ್ರಮದ ಡಿಎನ್‌ಎ ಎಂದು ಟೀಕೆ

ಚಿಕ್ಕಮಗಳೂರು: ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನ ಆರೋಪ ಮಾಡಿರುವುದಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯ ಆರೋಪವನ್ನು “ಮೂರ್ಖತನ” ಎಂದು ಕರೆದಿರುವ ರವಿ, ಕಾಂಗ್ರೆಸ್‌ಗೆ ಚುನಾವಣಾ ಅಕ್ರಮದ ಇತಿಹಾಸವಿದೆ ಎಂದು ಆರೋಪಿಸಿದ್ದಾರೆ.

“1975ರ ಜೂನ್ 12ರಂದು ಅಲಹಾಬಾದ್‌ನ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ತೀರ್ಪು ನೀಡಿದ್ದರು. ಆಗ ಅಪರಾಧಿಯ ಸ್ಥಾನದಲ್ಲಿ ಇದ್ದವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು. ಕಾಂಗ್ರೆಸ್‌ಗೆ ಚುನಾವಣಾ ಅಕ್ರಮದ ಡಿಎನ್‌ಎ ಇದೆ,” ಎಂದು ರವಿ ವಾಗ್ದಾಳಿ ನಡೆಸಿದ್ದಾರೆ

ರಾಹುಲ್ ಗಾಂಧಿಯವರ ಆರೋಪಗಳನ್ನು ಖಂಡಿಸಿರುವ ರವಿ, “ಮತಗಳ್ಳತನ ಆಗಿದ್ದರೆ ರಾಹುಲ್ ಗಾಂಧಿ, ಖರ್ಗೆಯವರ ಅಳಿಯ, ಪ್ರಿಯಾಂಕ ಗಾಂಧಿಯೂ ಗೆದ್ದಿರಲಿಲ್ಲ. ನೀವು ಗೆದ್ದರೆ ಎಲ್ಲ ಸರಿ, ಸೋತರೆ ಸರಿಯಿಲ್ಲ. ಇದು ಮಾನಸಿಕ ಆಸ್ಪತ್ರೆಯ ರೋಗಿಯ ಮನಸ್ಥಿತಿ,” ಎಂದು ಟೀಕಿಸಿದ್ದಾರೆ. “ರಾಹುಲ್ ಗಾಂಧಿಯ ನೇತೃತ್ವದಲ್ಲಿ 94 ಚುನಾವಣೆಗಳಲ್ಲಿ ಕಾಂಗ್ರೆಸ್ ಕೇವಲ ಬೆರಳೆಣಿಕೆಯಷ್ಟು ಗೆದ್ದಿದೆ. ಈ ಮೂರ್ಖ ನಾಯಕನನ್ನು ಕಾಂಗ್ರೆಸ್ ನಾಯಕರು ಮೂಢರಂತೆ ಹಿಂಬಾಲಿಸುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಯವರು ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,250 ಮತಗಳ ಚೋರಿಯಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರವಿ, “ಸರ್ವಜ್ಞ ನಗರದಲ್ಲಿ ಕಾಂಗ್ರೆಸ್‌ಗೆ 75 ಸಾವಿರ ಮತಗಳ ಮುನ್ನಡೆ ಬಂದಾಗ ಅನುಮಾನ ಬರಲಿಲ್ಲ.

ಆದರೆ ಮಹದೇವಪುರದಲ್ಲಿ ಬಿಜೆಪಿಗೆ ಮುನ್ನಡೆ ಬಂದಾಗ ಮಾತ್ರ ಅನುಮಾನ ಬರುತ್ತದೆ. ಚುನಾವಣಾ ಆಯೋಗಕ್ಕೆ ಮತಗಳ್ಳತನಕ್ಕೆ ಯಾವುದೇ ನೆಟ್‌ವರ್ಕ್ ಇಲ್ಲ. ಬೀದಿಯಲ್ಲಿ ಆರೋಪ ಮಾಡಿ ಅನುಮಾನ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ, ಆದರೆ ಪ್ರಮಾಣ ಪತ್ರ ಸಲ್ಲಿಸಿ ದೂರು ನೀಡುತ್ತಿಲ್ಲ,” ಎಂದು ಆರೋಪಿಸಿದ್ದಾರೆ.

“ರಾಹುಲ್ ಗಾಂಧಿ ಸೈನಿಕರ ವಿರುದ್ಧ ಮಾತನಾಡಿ ನ್ಯಾಯಾಲಯದಿಂದ ಛೀಮಾರಿ ತಿಂದಿದ್ದಾರೆ. ಈಗ ಮತ್ತೆ ಛೀಮಾರಿ ತಿನ್ನುವ ಸಾಧ್ಯತೆ ಇದೆ,” ಎಂದು ರವಿ ಎಚ್ಚರಿಕೆ ನೀಡಿದ್ದಾರೆ. “ಕಾಂಗ್ರೆಸ್‌ನ ಈ ಆರೋಪಗಳು ಬುದ್ಧಿವಂತಿಕೆಯ ಲಕ್ಷಣವಲ್ಲ, ಬುದ್ಧಿವಂತಿಕೆಯನ್ನು ಒತ್ತೆ ಇಟ್ಟವರ ಲಕ್ಷಣವಾಗಿದೆ,” ಎಂದು ವ್ಯಂಗ್ಯವಾಡಿದ್ದಾರೆ.