ಬೆಂಗಳೂರು (kannadapost.com): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ 2026-27ನೇ ಸಾಲಿನ ಪ್ರತಿಷ್ಠಿತ ದಸರಾ ಕ್ರೀಡಾಕೂಟದಲ್ಲಿ ಕ್ರೀಡಾಪಟು ಭೂಮಿಕಾ ಎಸ್. ತಗಡೂರು ಅವರು ಅತ್ಯುತ್ತಮ ಪ್ರದರ್ಶನ ನೀಡಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ದಸರಾ ಕ್ರೀಡಾಕೂಟದ ಡಬಲ್ಸ್ ಲಾನ್ ಟೆನ್ನಿಸ್ ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಭೂಮಿಕಾ ಎಸ್. ತಗಡೂರು ಮತ್ತು ದೇವಿಕಾ ಅವರ ಜೋಡಿ ಕಂಚಿನ ಪದಕ ಗೆದ್ದು ಬೀಗಿದೆ.
ನೆಟ್‌ಬಾಲ್‌ನಲ್ಲೂ ರಾಷ್ಟ್ರಮಟ್ಟದ ಸಾಧನೆ:
ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಭೂಮಿಕಾ ತಗಡೂರು ಅವರು ಕೇವಲ ಟೆನ್ನಿಸ್ ಮಾತ್ರವಲ್ಲದೆ, ಈ ಹಿಂದೆ ‘ನೆಟ್‌ಬಾಲ್’ ಕ್ರೀಡೆಯಲ್ಲಿಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ರಾಜ್ಯಮಟ್ಟದ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಬರೋಬ್ಬರಿ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಇವರು, ತಮ್ಮ ಅದ್ಭುತ ಆಟಕ್ಕಾಗಿ ಎರಡು ಬಾರಿ ‘ಬೆಸ್ಟ್ ಆಲ್‌ರೌಂಡರ್’ (Best All-rounder) ಪ್ರಶಸ್ತಿಗೂ ಭಾಜನರಾಗಿದ್ದರು.
ಮುಖ್ಯಮಂತ್ರಿಗಳಿಂದ ಸನ್ಮಾನ:
ರಾಷ್ಟ್ರಮಟ್ಟದ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಭೂಮಿಕಾ ಅವರು ಎರಡು ಬಾರಿ ಕಂಚಿನ ಪದಕ ಗೆದ್ದಿದ್ದರು. ಕ್ರೀಡಾಕ್ಷೇತ್ರದಲ್ಲಿನ ಇವರ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ವತಿಯಿಂದ ಅಂದಿನ ಮುಖ್ಯಮಂತ್ರಿಗಳು ಇವರನ್ನು ವಿಶೇಷವಾಗಿ ಸನ್ಮಾನಿಸಿದ್ದರು.
ನೆಟ್‌ಬಾಲ್‌ನಲ್ಲಿ ಗಮನಾರ್ಹ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದ ಭೂಮಿಕಾ ಅವರು, ಇದೀಗ ಲಾನ್ ಟೆನ್ನಿಸ್‌ನಲ್ಲಿಯೂ ಪದಕ ಗೆಲ್ಲುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ತಮ್ಮ ಬಹುಮುಖಿ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.












