- ದಿವಂಗತ ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಪುಸ್ತಕದ ಪೈರಸಿ ಪ್ರತಿಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆಜಾನ್ ಸಲ್ಲಿಸಿದ್ದ ಎಫ್ಐಆರ್ ರದ್ದತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ
ಬೆಂಗಳೂರು(kanndapost.com): ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ದಿವಂಗತ ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿ ‘ಹೇಳಿ ಹೋಗು ಕಾರಣ’ ಪುಸ್ತಕದ ನಕಲಿ (ಪೈರಸಿ) ಪ್ರತಿಗಳನ್ನು ಆನ್ಲೈನ್ನಲ್ಲಿ ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಇ-ಕಾಮರ್ಸ್ ದೈತ್ಯ ‘ಅಮೆಜಾನ್’ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಅಮೆಜಾನ್ ವಿರುದ್ಧದ ಪೊಲೀಸ್ ತನಿಖೆ ಮುಂದುವರಿಯುವುದು ಖಚಿತವಾಗಿದೆ.
ಅಮೆಜಾನ್ ಸೆಲ್ಲರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ರವಿ ಬೆಳಗೆರೆ ಅವರ ಪುತ್ರಿ ಹಾಗೂ ‘ಭಾವನಾ ಪ್ರಕಾಶನ’ದ ಮಾಲೀಕರಾದ ಭಾವನಾ ಬೆಳಗೆರೆ ಅವರು ಈ ಕೃತಿಯ ಅಧಿಕೃತ ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿದ್ದಾರೆ. ಆದರೆ, ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಮೀಶೋ ಜಾಲತಾಣಗಳಲ್ಲಿ ಈ ಪುಸ್ತಕದ ನಕಲಿ ಪ್ರತಿಗಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಅವರು ಫೆಬ್ರವರಿ 4, 2026ರಂದು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 350 ರೂ. ಮುಖಬೆಲೆಯ ಈ ಪುಸ್ತಕವನ್ನು ಆನ್ಲೈನ್ ವೇದಿಕೆಗಳಲ್ಲಿ ಕೇವಲ 149 ರೂ.ಗೆ ಮಾರಾಟ ಮಾಡಿ ಭಾರೀ ಆರ್ಥಿಕ ನಷ್ಟ ಉಂಟುಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ದೂರಿನನ್ವಯ ಪೊಲೀಸರು ಕೃತಿಚೌರ್ಯ ಕಾಯ್ದೆ (Copyright Act) ಕಲಂ 51(1)(b) ಮತ್ತು 63ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಅಮೆಜಾನ್ಗೆ ನೋಟಿಸ್ ಜಾರಿಗೊಳಿಸಿದ್ದರು.
3,000 ಪುಸ್ತಕ ಮುದ್ರಣ, 6,719 ಪ್ರತಿಗಳ ಮಾರಾಟ!
ವಿಚಾರಣೆ ವೇಳೆ ಅಮೆಜಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಜೆ. ಚೌಟ, “ಅಮೆಜಾನ್ ಕೇವಲ ಮಾರಾಟಗಾರರು ಮತ್ತು ಗ್ರಾಹಕರ ನಡುವಿನ ಆನ್ಲೈನ್ ಮಧ್ಯವರ್ತಿ ವೇದಿಕೆ ಮಾತ್ರ. ಪುಸ್ತಕದ ಬೆಲೆ ಅಥವಾ ಮಾರಾಟದಲ್ಲಿ ಕಂಪನಿಯ ನೇರ ಪಾತ್ರವಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 79ರ ಅಡಿಯಲ್ಲಿ ನಮಗೆ ರಕ್ಷಣೆ ಇದ್ದು, ಪೊಲೀಸರ ಸೂಚನೆಯಂತೆ ಈಗಾಗಲೇ ಆ ಪುಸ್ತಕದ ಲಿಸ್ಟಿಂಗ್ ತೆಗೆದುಹಾಕಲಾಗಿದೆ” ಎಂದು ವಾದಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಮತ್ತು ದೂರುದಾರರ ಪರ ವಕೀಲೆ ಅನಿತಾ ಎಸ್.ಎಂ. ಪಾಟೀಲ್, ಅಮೆಜಾನ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ವಾದಿಸಿದರು. “2019ರಲ್ಲಿ ಭಾವನಾ ಪ್ರಕಾಶನವು ಕೇವಲ 3,000 ಪ್ರತಿಗಳನ್ನು ಮಾತ್ರ ಮುದ್ರಿಸಿತ್ತು. ಆದರೆ ಅಮೆಜಾನ್ ದಾಖಲೆಗಳ ಪ್ರಕಾರವೇ ಆ ವರ್ಷ 6,719 ಪುಸ್ತಕಗಳು ಮಾರಾಟವಾಗಿವೆ. ಹೆಚ್ಚುವರಿಯಾಗಿ ಮಾರಾಟವಾದ ಸುಮಾರು 3,800 ಪುಸ್ತಕಗಳು ಎಲ್ಲಿಂದ ಬಂದವು ಎಂಬುದರ ಕುರಿತು ತನಿಖೆಯಾಗಬೇಕಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ, ಅಮೆಜಾನ್ ನೀಡಿದ ಮಾಹಿತಿಯಲ್ಲೇ ವಿವಿಧ ಮಾರಾಟಗಾರರ ಮೂಲಕ ಒಟ್ಟು 10,906 ಪ್ರತಿಗಳು ಮಾರಾಟವಾಗಿರುವುದು ದಾಖಲಾಗಿದೆ.
ನ್ಯಾಯಾಲಯದ ತೀರ್ಪು:
ಮೂಲ ಪುಸ್ತಕ ಹಾಗೂ ನಕಲಿ ಪುಸ್ತಕದ ಮುಖಪುಟ ಮತ್ತು ಹಿಂಬದಿಯ ಪುಟಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಮೇಲ್ನೋಟಕ್ಕೆ ಪುಸ್ತಕದ ಕವರ್ ಪೇಜ್ಗಳಲ್ಲಿ ವ್ಯತ್ಯಾಸವಿರುವುದು ಮತ್ತು ಕೃತಿಚೌರ್ಯ ನಡೆದಿರುವುದು ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನಧಿಕೃತ ಪ್ರತಿಗಳು ಯಾವುದೇ ಪರಿಶೀಲನೆಯಿಲ್ಲದೆ ಹೇಗೆ ಮಾರಾಟವಾದವು ಮತ್ತು ಅಮೆಜಾನ್ ತನ್ನ ಶಾಸನಬದ್ಧ ಪರಿಶೀಲನಾ ಕರ್ತವ್ಯವನ್ನು (Due Diligence) ಪಾಲಿಸಿದೆಯೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ ಎಂದು ತಿಳಿಸಿ, ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದರು












