ಬೆಂಗಳೂರು : ಪಾರಿವಾಳ ಪ್ರೀತಿ ಕಾನೂನು ಸಂಕಷ್ಟಕ್ಕೆ! ಕಾಳು ಹಾಕಿದ್ದಕ್ಕೆ ಕೋರ್ಟ್ ಶಿಕ್ಷೆ – ದೇಶದಲ್ಲೇ ಮೊದಲ ಪ್ರಕರಣ

ಬೆಂಗಳೂರು : ಪಾರಿವಾಳಗಳಿಗೆ ಆಹಾರ ನೀಡುವುದು ಸಾಮಾನ್ಯವಾಗಿ ದಯೆಯ ಸಂಕೇತವಾಗಿ ಕಾಣಿಸಿಕೊಳ್ಳುತ್ತಿದ್ದರೂ, ಇದೇ ಅಭ್ಯಾಸ ಒಬ್ಬ ಉದ್ಯಮಿಗೆ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ಮುಂಬೈನ ದಾದರ್ ಪ್ರದೇಶದ ಉದ್ಯಮಿ ನಿತಿನ್ ಶೇತ್ ಅವರು ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದ್ದಕ್ಕಾಗಿ ನ್ಯಾಯಾಲಯದಿಂದ ದೋಷಿಯಾಗಿದ್ದಾರೆ.

ಬಿಎಂಸಿ ವಿಧಿಸಿದ್ದ ನಿಷೇಧದ ಹೊರತಾಗಿಯೂ ಪಾರಿವಾಳಗಳಿಗೆ ಆಹಾರ ಹಾಕುತ್ತಿದ್ದುದಾಗಿ ತನಿಖೆ ವೇಳೆ ನಿತಿನ್ ಶೇತ್ ತಪ್ಪು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ವೈ. ಮಿಸಾಲ್ ಅವರು, ನಿತಿನ್ ಶೇತ್ ಅವರ ಕೃತ್ಯ ಮಾನವ ಜೀವ, ಆರೋಗ್ಯ ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 223 (ಬಿ) ಹಾಗೂ ಸೆಕ್ಷನ್ 271ರ ಅಡಿಯಲ್ಲಿ ದೋಷಿ ಎಂದು ಘೋಷಿಸಿ ₹5,000 ದಂಡ ವಿಧಿಸಲಾಗಿದೆ. ಕಳೆದ ಸೋಮವಾರ ಈ ತೀರ್ಪು ಪ್ರಕಟವಾಗಿದೆ.

ಪಾರಿವಾಳಗಳಿಂದ ಹರಡುವ ರೋಗಗಳು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಈ ಪ್ರಕರಣವನ್ನು ಭವಿಷ್ಯದ ಎಚ್ಚರಿಕೆಯ ಪೂರ್ವನಿದರ್ಶನವಾಗಿ ಪರಿಗಣಿಸಲಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಇದೇ ಮೊದಲ ಬಾರಿಗೆ ಪಾರಿವಾಳಗಳಿಗೆ ಆಹಾರ ನೀಡಿದ್ದಕ್ಕೆ ಶಿಕ್ಷೆ ವಿಧಿಸಿರುವ ಪ್ರಕರಣ ಇದಾಗಿದೆ.

ಇನ್ನು ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದ್ದು, ಬಾಂಬೆ ಹೈಕೋರ್ಟ್ ಕೂಡ ಕಳೆದ ಆಗಸ್ಟ್‌ನಲ್ಲಿ ಈ ನಿಷೇಧವನ್ನು ಸಮರ್ಥಿಸಿಕೊಂಡಿತ್ತು. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅಗತ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಂಬೈ ಮಾತ್ರವಲ್ಲದೆ, ಬೆಂಗಳೂರಿನಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. ಈ ತೀರ್ಪು ಇಂತಹ ನಿಯಮಗಳನ್ನು ನಿರ್ಲಕ್ಷ್ಯ ಮಾಡುವವರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.