ಬೆಂಗಳೂರು : ಸಾವಿರಾರು ಕೋಟಿ ಉದ್ಯಮ ಸಾಮ್ರಾಜ್ಯದ ಒಡೆಯ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಘಟನೆಗೆ ನಾಲ್ಕು ದಿನಗಳು ಕಳೆದರೂ ಸಾವಿನ ಹಿಂದಿನ ನಿಜ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಐಟಿ ದಾಳಿ ವೇಳೆ ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ರಾಯ್, ಇಷ್ಟೊಂದು ದೊಡ್ಡ ಬಿಸಿನೆಸ್ ಮ್ಯಾಗ್ನೆಟ್ ಆಗಿದ್ದರೂ ಆತ್ಮಹತ್ಯೆಗೆ ಶರಣಾದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನ್ಯಾಯಾಂಗ ತನಿಖೆಗೆ ಒತ್ತಾಯ: ಕೇಂದ್ರಕ್ಕೆ ಕೇರಳ ಸಿಎಂ ಪತ್ರ
ಈ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಎಸ್‌ಐಟಿಗೆ ಒಪ್ಪಿಸಿದ್ದರೂ, ಇದನ್ನು ಒಪ್ಪದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದಾರೆ. ಐಟಿ ದಾಳಿ ವೇಳೆ ಈ ಘಟನೆ ನಡೆದಿರುವುದು ದೇಶದ ತೆರಿಗೆ ಆಡಳಿತ ವ್ಯವಸ್ಥೆಗೆ ಕಳಂಕ ಎಂದು ಆರೋಪಿಸಿರುವ ಅವರು, ನ್ಯಾಯಾಂಗ ತನಿಖೆಯಿಂದ ಮಾತ್ರ ಸಾವಿನ ಸತ್ಯ ಹೊರಬರಲಿದೆ ಎಂದು ಒತ್ತಾಯಿಸಿದ್ದಾರೆ. ಐಟಿ ಅಧಿಕಾರಿಗಳು ಪ್ರೋಟೋಕಾಲ್ ಪಾಲಿಸದೇ, ದಾಳಿ ವೇಳೆ ವ್ಯಕ್ತಿಯನ್ನು ಮಾನಿಟರಿಂಗ್‌ನಲ್ಲಿ ಇಡದೇ ಬಿಟ್ಟಿದ್ದು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಕೊಚ್ಚಿಯ ಫ್ಲ್ಯಾಟ್ ಮಾರಾಟವೇ ಕಂಟಕವಾಯ್ತಾ?
ಇನ್ನು ಸಿ.ಜೆ.ರಾಯ್ ಆತ್ಮಹತ್ಯೆಗೆ ಕೊಚ್ಚಿಯ ಫ್ಲ್ಯಾಟ್ ಮಾರಾಟ ಪ್ರಮುಖ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಎದ್ದಿದೆ. 2025ರಲ್ಲಿ ಕೊಚ್ಚಿಯಲ್ಲಿ 156 ಫ್ಲ್ಯಾಟ್‌ಗಳನ್ನು ಮೂಲ ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಡಿಮೆ ಮೊತ್ತವನ್ನು ಆನ್‌ಲೈನ್ ಮೂಲಕ ಪಡೆದು, ಉಳಿದ ಹಣವನ್ನು ನಗದು ರೂಪದಲ್ಲಿ ಪಡೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ತೆರಿಗೆ ವಂಚನೆ ಆರೋಪದಡಿ ಐಟಿ ಅಧಿಕಾರಿಗಳು ರಾಯ್ ಬೆನ್ನುಬಿದ್ದಿದ್ದರು ಎನ್ನಲಾಗುತ್ತಿದೆ.
ಐಟಿ ದಾಳಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ರಾಯ್
ನವೆಂಬರ್ 27 ಹಾಗೂ ಡಿಸೆಂಬರ್ 3ರಂದು ನಡೆದ ಐಟಿ ದಾಳಿಗಳನ್ನು ಪ್ರಶ್ನಿಸಿ ಸಿ.ಜೆ.ರಾಯ್ ಡಿಸೆಂಬರ್ 16ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಐಟಿ ಶೋಧನೆ ಹಾಗೂ ಪಂಚನಾಮೆ ಕಾನೂನುಬಾಹಿರ ಎಂದು ವಾದಿಸಿದ್ದ ಅವರು, ಎರಡೇ ದಿನಗಳಲ್ಲಿ ಅರ್ಜಿಯನ್ನು ವಾಪಸ್ ಪಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಎಂಟು ಕಂಪನಿಗಳ ಪರ ಅರ್ಜಿ ಸಲ್ಲಿಸಿ ಹಿಂಪಡೆಯಲಾಗಿತ್ತು.
9 ಪುಟಗಳ ಡೆತ್ ನೋಟ್: ನಿಜವೇ ಅಥವಾ ಡೈರಿಯೇ?
ಸಾವಿಗೂ ಮುನ್ನ ರಾಯ್ ತಮ್ಮ ತಾಯಿಗೆ ಕೊನೆಯ ಕರೆ ಮಾಡಿದ್ದರಂತೆ. ಈ ಆಘಾತದಿಂದ ತಾಯಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು 9 ಪುಟಗಳ ಡೆತ್ ನೋಟ್ ಬರೆದಿದ್ದಾರೆ ಎಂಬ ಸುದ್ದಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ. ರಾಜಕಾರಣಿ ಸೇರಿ ಹಲವರ ಹೆಸರುಗಳ ಉಲ್ಲೇಖವಿದೆ ಎನ್ನಲಾಗಿದರೂ, ಎಸ್‌ಐಟಿ ಅಧಿಕಾರಿಗಳು ಇದನ್ನು ಡೆತ್ ನೋಟ್ ಎಂದು ಒಪ್ಪಿಲ್ಲ. ದಿನನಿತ್ಯದ ಆಗುಹೋಗುಗಳನ್ನು ಬರೆಯುತ್ತಿದ್ದ ಡೈರಿಯನ್ನೇ ಡೆತ್ ನೋಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ, ಯಶಸ್ಸಿನ ಉತ್ತುಂಗದಲ್ಲಿದ್ದ ಸಾವಿರಾರು ಕೋಟಿ ಉದ್ಯಮಿ ಸಿ.ಜೆ.ರಾಯ್, ಇಂತಹ ಕಠಿಣ ನಿರ್ಧಾರಕ್ಕೆ ಏಕೆ ಬಂದರು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಬಿಸಿನೆಸ್ ಮ್ಯಾಗ್ನೆಟ್ ಸೂಸೈಡ್ ಮಿಸ್ಟ್ರಿ ಈಗಲೂ ಸಸ್ಪೆನ್ಸ್‌ನಲ್ಲೇ ಉಳಿದಿದೆ.










