ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಮಾರತ್ತಹಳ್ಳಿಯ ಅಶ್ವತ್ಥನಗರದಲ್ಲಿ ಆತಂಕ ಮೂಡಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಟ್ಯೂಷನ್‌ಗೆ ಹೋಗುವ ವಿಚಾರವಾಗಿ ಪೋಷಕರು ಬರೆದಿದ್ದಕ್ಕೆ ಮನನೊಂದ 13 ವರ್ಷದ ಬಾಲಕಿ ಹಾಗೂ ಆಕೆಯ 9 ವರ್ಷದ ತಮ್ಮ ಮನೆ ಬಿಟ್ಟು ಓಡಿಹೋಗಿದ್ದರು.
ಕಳೆದ ಫೆಬ್ರವರಿ 1ರಂದು ಸಂಜೆ ಸುಮಾರು 3 ಗಂಟೆಗೆ ಯಾರಿಗೂ ಹೇಳದೆ ಮನೆಯಿಂದ ಹೊರಟಿದ್ದ ಮಕ್ಕಳ ನಾಪತ್ತೆಯಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಉಚಿತ ಬಸ್ ಪ್ರಯಾಣದ ಅರಿವು: ಆಧಾರ್ ಹಿಡಿದು ಶಿವಮೊಗ್ಗ–ಚಿತ್ರದುರ್ಗ ಸುತ್ತಾಟ!
ಮನೆ ಬಿಟ್ಟ ಬಾಲಕಿಯ ಚಾಣಾಕ್ಷತನವೇ ಪೊಲೀಸರನ್ನೇ ಅಚ್ಚರಿಗೊಳಿಸಿತು. ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಇರುವುದನ್ನು ತಿಳಿದಿದ್ದ ಬಾಲಕಿ, ತನ್ನ ಬಳಿ ಇದ್ದ ಆಧಾರ್ ಕಾರ್ಡ್‌ನ್ನು ಬಳಸಿ ತಮ್ಮನೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ಏರಿದ್ದಾಳೆ. ಹಣವಿಲ್ಲದೇ ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳು ಸಂಚರಿಸಿದ್ದರೆಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳ ಸಹಾಯ: ಮಕ್ಕಳ ಪತ್ತೆಗೆ ಬ್ರೇಕ್‌ಥ್ರೂ
ದೂರು ದಾಖಲಾಗುತ್ತಿದ್ದಂತೆಯೇ ಹೆಚ್‌ಎಎಲ್ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದರು. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸುವುದರ ಜೊತೆಗೆ, ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿತ್ತು. ಈ ಫೋಟೋಗಳನ್ನು ಕಂಡ ಚಿತ್ರದುರ್ಗದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಕ್ಕಳನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಬೆಂಗಳೂರಿಗೆ ಕರೆತಂದು ಪೋಷಕರಿಗೆ ಒಪ್ಪಿಸಿದರು.
ಟಿಕೆಟ್ ಇಲ್ಲದೆ 9 ವರ್ಷದ ಬಾಲಕನ ಪ್ರಯಾಣ!
ಬಾಲಕಿಗೆ ಉಚಿತ ಪ್ರಯಾಣ ಸೌಲಭ್ಯ ಇದ್ದರೂ, 9 ವರ್ಷದ ಬಾಲಕನು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದು ಕಂಡಕ್ಟರ್ ಗಮನಕ್ಕೂ ಬಾರದಿರುವುದು ಗಮನಾರ್ಹ. ಒಟ್ಟಿನಲ್ಲಿ ಉಚಿತ ಯೋಜನೆಗಳ ಬಳಕೆಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಮಕ್ಕಳನ್ನು ಮರಳಿ ಪಡೆದ ಪೋಷಕರು ಮಾತ್ರ ನಿಟ್ಟುಸಿರು ಬಿಟ್ಟಿದ್ದಾರೆ.











