ಬೆಂಗಳೂರು : ಮೂರು ಮದುವೆಯಾಗಿ ಲಕ್ಷ ಲಕ್ಷ ಲೂಟಿ.. ಕಿಲಾಡಿ ಲೇಡಿ ಸುಳ್ಳಿನ ಕತೆಗಳೇ ಅತ್ಯದ್ಭುತ..!

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದಲ್ಲಿ ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಯುವಕರನ್ನು ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಮಹಿಳೆಯೊಬ್ಬಳ ಪ್ರಕರಣ ಬಹಿರಂಗವಾಗಿದೆ.

ಹಲವು ಮಂದಿಯನ್ನು ನಂಬಿಸಿ ಮದುವೆಯಾಗಿರುವ ಆಕೆ ಹಣ ಪಡೆದ ಬಳಿಕ ಸಂಬಂಧ ಕತ್ತರಿಸುತ್ತಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದೀಗ ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಯಾರು ಈ ಆರೋಪಿತೆ?

ಅಣಬೆ ಗ್ರಾಮದ ಸುಧಾರಾಣಿ ಎಂಬಾಕೆಯೇ ವಂಚನೆ ಆರೋಪ ಎದುರಿಸುತ್ತಿರುವ ಮಹಿಳೆ. ಈಕೆ ಈಗಾಗಲೇ ಮೂವರು ಪುರುಷರೊಂದಿಗೆ ಮದುವೆಯಾಗಿದ್ದು, ಇನ್ನೂ ಹಲವರಿಗೆ ಇದೇ ರೀತಿಯಲ್ಲಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ವಿಶೇಷವಾಗಿ ಆರ್ಥಿಕವಾಗಿ ಸ್ಥಿರವಾಗಿರುವವರನ್ನೇ ಗುರಿಯಾಗಿಸಿಕೊಂಡು ಪ್ರೀತಿಯ ನಾಟಕವಾಡುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೊದಲ ಗಂಡನನ್ನು ಬಿಟ್ಟು ಪರಾರಿ

ಸುಧಾರಾಣಿ ಮೊದಲು ವೀರೆಗೌಡ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಕೆಲ ವರ್ಷಗಳ ಸಂಸಾರದ ಬಳಿಕ ಆಕೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ಏಕಾಏಕಿ ಕಾಣೆಯಾಗಿದ್ದಳು. ವಿಚಾರಿಸಿದಾಗ “ನನ್ನ ಗಂಡನಿಗೆ ಕಾರು ಹಾಗೂ ಬುಲೆಟ್ ಓಡಿಸಲು ಬರೋದಿಲ್ಲ, ಅದಕ್ಕೇ ಬಿಟ್ಟೆ” ಎಂದು ವಿಚಿತ್ರ ಕಾರಣ ಹೇಳಿದ್ದಾಳೆ ಎಂದು ವೀರೆಗೌಡ ಆರೋಪಿಸಿದ್ದಾರೆ.

‘ಗಂಡ ಸತ್ತಿದ್ದಾನೆ’ ಎಂದು ಸುಳ್ಳು ಹೇಳಿ ಎರಡನೇ ಮದುವೆ

ಮೊದಲ ಗಂಡನಿಂದ ದೂರವಾದ ನಂತರ ಸುಧಾರಾಣಿ ಅನಂತಮೂರ್ತಿ ಎಂಬ ಡೆಲಿವರಿ ಬಾಯ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ತನ್ನ ಗಂಡ ಸತ್ತಿದ್ದಾನೆ ಎಂದು ಸುಳ್ಳು ಹೇಳಿ ಆತನ ನಂಬಿಕೆ ಗಳಿಸಿದ್ದಳು. ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿ ಸುಮಾರು ಒಂದೂಕಾಲು ವರ್ಷ ಸಂಸಾರ ನಡೆಸಿದ್ದಾಳೆ. ಈ ಅವಧಿಯಲ್ಲಿ ಅನಂತಮೂರ್ತಿಯಿಂದ 15 ರಿಂದ 20 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಹಣ ಸಿಕ್ಕ ತಕ್ಷಣ ಮತ್ತೊಂದು ಸಂಬಂಧ

ಅನಂತಮೂರ್ತಿಯಿಂದ ದೊಡ್ಡ ಮೊತ್ತದ ಹಣ ಪಡೆದ ಬಳಿಕ ಆತನನ್ನೂ ಬಿಟ್ಟು ಸುಧಾರಾಣಿ ಈಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸವಾಗಿದ್ದಾಳೆ ಎನ್ನಲಾಗಿದೆ. ಹಣವಿರುವವರನ್ನೇ ಆಯ್ಕೆ ಮಾಡಿಕೊಂಡು ಪ್ರೀತಿ, ಮದುವೆ ಹೆಸರಿನಲ್ಲಿ ಆಸ್ತಿ ಮತ್ತು ಹಣ ಲೂಟಿ ಮಾಡುವುದು ಈಕೆಯ ಕ್ರಮವಾಗಿತ್ತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಇಬ್ಬರು ಗಂಡಂದಿರು

ಈ ವಂಚನೆ ವಿರುದ್ಧ ಸುಧಾರಾಣಿಯ ಮೊದಲ ಗಂಡ ವೀರೆಗೌಡ ಹಾಗೂ ಎರಡನೇ ಗಂಡ ಅನಂತಮೂರ್ತಿ ಇಬ್ಬರೂ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮಂತ ಅಮಾಯಕರನ್ನು ಪ್ರೀತಿಯ ನಂಬಿಕೆಯಿಂದ ಬಲೆಗೆ ಬೀಳಿಸಿ ಹಣ ದೋಚುತ್ತಿರುವ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ

ಪ್ರೀತಿಯ ಹೆಸರಿನಲ್ಲಿ ಬೇಗನೆ ಮದುವೆ, ಹಣಕಾಸು ಸಹಾಯ ಕೇಳುವವರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಪರಿಚಯಗಳ ಮೂಲಕ ನಡೆಯುವ ಇಂತಹ ವಂಚನೆಗಳ ವಿರುದ್ಧ ಜಾಗೃತಿಯೂ ಅಗತ್ಯವೆಂದು ಪೊಲೀಸ್ ಮೂಲಗಳು ತಿಳಿಸಿವೆ.