ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿದ ಭರ್ಜರಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ನಡೆದ ಈ ಕಾರ್ಯಾಚರಣೆಯ ವೇಳೆ ಲೋಕಾಯುಕ್ತ ಅಧಿಕಾರಿಗಳನ್ನು ಎದುರಿಸಿ ಇನ್ಸ್‌ಪೆಕ್ಟರ್ ಕೂಗಾಡಿ ರಂಪಾಟ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆಯ ಮೂಲ ಒಂದು ಹಣ ಹೂಡಿಕೆ ವಂಚನೆ ಪ್ರಕರಣ. ಧನರಾಜ್ ಎಂಬುವವರು ಲಾಭದ ಆಸೆ ತೋರಿಸಿ ತಮ್ಮಿಂದ 19 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆಂದು ಸೂರಜ್, ಸುಜನ್ ಮತ್ತು ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದರು. ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇರೆಗೆ ಜನವರಿ 22ರಂದು ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ವೇಳೆ ಆರೋಪಿಗಳ ಮನೆಗೆ ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದ ಪೊಲೀಸರು ತೆರಳಿದಾಗ ವಾಗ್ವಾದ ನಡೆದಿದೆ ಎನ್ನಲಾಗಿದೆ. ಬಳಿಕ ಪ್ರಕರಣವನ್ನು ‘ಸೆಟಲ್’ ಮಾಡುವ ನೆಪದಲ್ಲಿ ಹಾಗೂ ಬಡ್ಸ್ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಿಂದ ಬಿಡಿಸಲು ಮತ್ತು ಬಂಧಿಸದಿರಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದರಿಂದ ಬೇಸತ್ತ ಆರೋಪಿಗಳ ಪರವಾಗಿ ಮೊಹಮ್ಮದ್ ಅಕ್ಬರ್ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಟ್ರ್ಯಾಪ್ ಯೋಜನೆ ರೂಪಿಸಲಾಯಿತು. ಆಗಲೇ ಇನ್ಸ್‌ಪೆಕ್ಟರ್ 1 ಲಕ್ಷ ರೂಪಾಯಿ ಪಡೆದಿದ್ದರೆಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಉಳಿದ 4 ಲಕ್ಷ ರೂಪಾಯಿ ಪಡೆಯಲು ಸೂಚಿಸಿದಂತೆ ಗೋವಿಂದರಾಜು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದರು.
ನಿಗದಿತ ಸಮಯಕ್ಕೆ ಹಣ ಹಸ್ತಾಂತರವಾಗುತ್ತಿದ್ದಂತೆಯೇ ಸುತ್ತುವರೆದ ಲೋಕಾಯುಕ್ತ ಪೊಲೀಸರು ಇನ್ಸ್‌ಪೆಕ್ಟರ್ ಅನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಈ ವೇಳೆ “ನಾನು ನಿಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ ಸರ್” ಎಂದು ಕೂಗಾಡುತ್ತಾ ತಾನು ತಪ್ಪಿಲ್ಲವೆಂದು ತೋರಿಸಲು ಹೈಡ್ರಾಮಾ ಸೃಷ್ಟಿಸಿದರೂ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡರು.
ಈ ಕುರಿತು ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಪ್ರಿವೆನ್ಷನ್ ಆಫ್ ಕರಪ್ಷನ್ ಕಾಯ್ದೆಯಡಿ ಟ್ರ್ಯಾಪ್ ನಡೆಸಲಾಗಿದೆ. ಒಟ್ಟು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಉಳಿದ 4 ಲಕ್ಷ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಅಧಿಕಾರಿಗಳ ಪಾತ್ರ ಇರುವ ಶಂಕೆ ಇದ್ದು ಸಮಗ್ರ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ವಂಚನೆ ಪ್ರಕರಣದ ಆರೋಪಿಗಳು ತಮ್ಮಿಂದ ಪಡೆದ ಹಣವನ್ನು ಈಗಾಗಲೇ ಹಿಂತಿರುಗಿಸಿದ್ದೇವೆ, ಇದು ಸಿವಿಲ್ ಸ್ವಭಾವದ ವ್ಯವಹಾರವಾಗಿದ್ದರೂ ಬಡ್ಸ್ ಕಾಯ್ದೆ ಹಾಕಿ ಒತ್ತಡ ತಂದಿದ್ದಾರೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಪ್ರಕರಣವು ರಾಜಧಾನಿ ಪೊಲೀಸರ ಮೇಲಿನ ವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಹಿರಂಗಗಳಾಗುವ ಸಾಧ್ಯತೆ ಇದೆ.










