ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ವ್ಯಾಪಕವಾಗಿ ಹೆಚ್ಚಾಗಿದೆ. ಮನೆಯಲ್ಲಿ ಪೋಷಕರು ಹೆಚ್ಚಾಗಿ ಮೊಬೈಲ್ ಬಳಸುವುದನ್ನು ನೋಡಿ ಮಕ್ಕಳು ಕೂಡ ಅದನ್ನೇ ಅನುಸರಿಸುತ್ತಿದ್ದಾರೆ.
ಇದರಿಂದ ಮಕ್ಕಳ ದೃಷ್ಟಿ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳೊಂದಿಗೆ ಮನೆಯಲ್ಲಿ ಹೆಚ್ಚು ಸಮಯ ಇರುವವರು ಸಾಮಾನ್ಯವಾಗಿ ತಾಯಿಯವರೇ ಆಗಿರುವುದರಿಂದ, ಈ ಹಿನ್ನೆಲೆಯಲ್ಲಿ ಮಹಿಳೆಯರ ಮೊಬೈಲ್ ಬಳಕೆಯ ಕುರಿತು ಮಹತ್ವದ ನಿರ್ಧಾರವೊಂದು ಕೈಗೊಳ್ಳಲಾಗಿದೆ.
ಇದು ದೇಶವ್ಯಾಪಿ ನಿಯಮವಲ್ಲ. ರಾಜಸ್ಥಾನದ ಜಲೋರ್ ಜಿಲ್ಲೆಯ ಒಂದು ಪಂಚಾಯತ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜಲೋರ್ ಜಿಲ್ಲೆಯ 15 ಗ್ರಾಮಗಳಲ್ಲಿ ಮಹಿಳೆಯರು ಹಾಗೂ ಹುಡುಗಿಯರು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಜನವರಿ 26ರಿಂದ ಜಾರಿಗೆ ಬರಲಿದೆ.
ಜಲೋರ್ ಜಿಲ್ಲೆಯ ಚೌಧರಿ ಸಮುದಾಯದ ಸುಂಧಮತ ಪಟ್ಟಿಯ ಘಾಜಿಪುರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಮುದಾಯದ ಅಧ್ಯಕ್ಷ ಸುಜನರಾಮ್ ಚೌಧರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15 ಗ್ರಾಮಗಳ ಗ್ರಾಮಸ್ಥರು ಹಾಗೂ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
ಹೊಸ ನಿಯಮದಂತೆ, ಮಹಿಳೆಯರು ಸಾರ್ವಜನಿಕ ಸಭೆಗಳು, ಸಾಮಾಜಿಕ ಕಾರ್ಯಕ್ರಮಗಳು, ಮದುವೆಗಳು ಅಥವಾ ನೆರೆಹೊರೆಯವರ ಮನೆಗಳಿಗೆ ಹೋಗುವಾಗ ಸ್ಮಾರ್ಟ್‌ಫೋನ್ ಕೊಂಡೊಯ್ಯುವಂತಿಲ್ಲ. ಸಂವಹನಕ್ಕಾಗಿ ಕೇವಲ ಮೂಲ ಕೀಪ್ಯಾಡ್ ಮೊಬೈಲ್ ಫೋನ್ ಬಳಸುವಂತೆ ಸೂಚಿಸಲಾಗಿದೆ. ಈ ನಿರ್ಬಂಧ ಸಾರ್ವಜನಿಕ ಸ್ಥಳಗಳಿಗೆ ಮಾತ್ರ ಸೀಮಿತವಲ್ಲದೆ, ಮನೆಯ ಹೊರಗೆ ಸ್ಮಾರ್ಟ್‌ಫೋನ್ ಬಳಕೆಯನ್ನು ಬಹುತೇಕ ನಿರ್ಬಂಧಿಸುತ್ತದೆ.
ಆದರೆ ಶಾಲಾ ಬಾಲಕಿಯರಿಗೆ ತಮ್ಮ ವಿದ್ಯಾಭ್ಯಾಸದ ಅಗತ್ಯಕ್ಕಾಗಿ ಸ್ಮಾರ್ಟ್‌ಫೋನ್ ಬಳಸಲು ವಿನಾಯಿತಿ ನೀಡಲಾಗಿದೆ. ಎಲ್ಲಾ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮುದಾಯದ ಅಧ್ಯಕ್ಷ ಸುಜನರಾಮ್ ಚೌಧರಿ ತಿಳಿಸಿದ್ದಾರೆ.










