ಬೆಂಗಳೂರು: ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ: ಜಂಟಿ ಅಧಿವೇಶನದಲ್ಲಿ ಸಂವಿಧಾನ ಉಲ್ಲಂಘನೆ ಆರೋಪ

ಬೆಂಗಳೂರು: ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಸರ್ಕಾರ ತಯಾರಿಸಿ ನೀಡಿದ್ದ ಭಾಷಣವನ್ನು ಓದದೇ, ತಾವೇ ರಚಿಸಿದ್ದ ಭಾಷಣವನ್ನು ಓದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರು ಕೇವಲ ಒಂದೇ ಸಾಲಿನ ಭಾಷಣ ಮಾಡಿ ವಿಧಾನಸೌಧದಿಂದ ಹೊರಟ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ತಯಾರಿಸಿದ ಭಾಷಣವನ್ನೇ ಓದಲೇಬೇಕು ಎಂದು ಸ್ಪಷ್ಟಪಡಿಸಿದರು. ಇದು ವಿಶೇಷ ಅಧಿವೇಶನವಾಗಿದ್ದು, ಸರ್ಕಾರವೇ ಅದನ್ನು ಕರೆದಿದೆ ಎಂದರು.

ವಿಶೇಷ ಅಧಿವೇಶನಕ್ಕೆ ಕಾರಣ ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ರದ್ದುಪಡಿಸಿ, ಹೊಸದಾಗಿ ವಿಬಿಜಿ ರಾಮ್ ಜೀ ಕಾಯ್ದೆ ಜಾರಿಗೊಳಿಸಿರುವುದೇ ಎಂದು ಸಿಎಂ ಹೇಳಿದರು. ಮಹಾತ್ಮ ಗಾಂಧಿ ಅವರ ಹೆಸರಿನ ಯೋಜನೆಯನ್ನು ತೆಗೆದುಹಾಕಿರುವುದಕ್ಕೆ ನಮ್ಮ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದರು. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ರೈಟ್ ಟು ವರ್ಕ್, ರೈಟ್ ಟು ಫುಡ್, ರೈಟ್ ಟು ಎಜುಕೇಶನ್ ತರಲಾಯಿತು.

ನರೇಗಾ ಯೋಜನೆಯ ಉದ್ದೇಶ ಹಳ್ಳಿಗಳಲ್ಲಿ ಕಾರ್ಮಿಕರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡುವುದಾಗಿತ್ತು. ರೈತರು, ದಲಿತರು, ಮಹಿಳೆಯರು ಇದರ ಪ್ರಮುಖ ಲಾಭಾರ್ಥಿಗಳಾಗಿದ್ದರು; ತಮ್ಮ ಊರು ಹಾಗೂ ಜಮೀನಲ್ಲೇ ಕೆಲಸ ಮಾಡುವ ಅವಕಾಶ ಇತ್ತು. ಆದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ರದ್ದು ಮಾಡಿದೆ ಎಂದು ಆರೋಪಿಸಿದರು.

ಹೊಸ ಕಾಯ್ದೆಯಲ್ಲಿ ಎಲ್ಲಿ ಕೆಲಸ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಮೊದಲು ಯಾವಾಗ ಬೇಕಾದರೂ ಕೆಲಸ ಸಿಗುತ್ತಿತ್ತು, ಪಂಚಾಯಿತಿಗಳು ಆಕ್ಷನ್ ಪ್ಲಾನ್ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದವು. ಈಗಿನ ಕಾಯ್ದೆಯಲ್ಲಿ ಆ ವ್ಯವಸ್ಥೆಯೇ ಇಲ್ಲ. ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿ ಮಾತನಾಡುತ್ತಿದ್ದಾರೆ. ನಮ್ಮ ಉದ್ದೇಶ ಮನರೇಗಾ ಮರುಸ್ಥಾಪನೆ ಮಾಡುವುದು ಹಾಗೂ ರಾಮ್ ಜೀ ಕಾಯ್ದೆಯನ್ನು ರದ್ದುಪಡಿಸುವುದೇ ಎಂದು ಸಿಎಂ ಆಗ್ರಹಿಸಿದರು.

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಸರ್ಕಾರ ತಯಾರಿಸಿದ ಭಾಷಣ ಓದದೇ ಸ್ವಂತ ಭಾಷಣ ಓದಿರುವ ಮೂಲಕ ಸಂವಿಧಾನ ಉಲ್ಲಂಘಿಸಿದ್ದಾರೆ. ಇದು ಜನಪ್ರತಿನಿಧಿ ಸಭೆಗೆ ಅವಮಾನವಾಗಿದೆ. ಈ ವಿಚಾರದಲ್ಲಿ ನಮ್ಮ ಸರ್ಕಾರ, ಪಕ್ಷ, ಎಂಎಲ್ಎಗಳು ಹಾಗೂ ಎಂಎಲ್ಸಿಗಳು ಕಾನೂನು ಹೋರಾಟ ನಡೆಸಲಿದ್ದಾರೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.