ಬೆಂಗಳೂರು: ಒಂದೇ ಸಾಲಿನಲ್ಲಿ ಭಾಷಣ ಮಾಡಿ ಹೊರಟು ಹೋದ ರಾಜ್ಯಪಾಲರು -ಅಧಿವೇಶನದಲ್ಲಿ ಭಾರೀ ಹೈಡ್ರಾಮಾ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಭಾರೀ ರಾಜಕೀಯ ಹೈಡ್ರಾಮಾ ನಡೆಯಿತು. ಸರ್ಕಾರ ಸಿದ್ಧಪಡಿಸಿ ನೀಡಿದ್ದ ಭಾಷಣವನ್ನು ಸಂಪೂರ್ಣವಾಗಿ ಓದಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದು, ಕೇವಲ ಒಂದೇ ಸಾಲಿನಲ್ಲಿ ಭಾಷಣ ಮಾಡಿ ಸದನದಿಂದ ಹೊರನಡೆದ ಘಟನೆ ತೀವ್ರ ಚರ್ಚೆಗೆ ಕಾರಣವಾಯಿತು. ರಾಜ್ಯಪಾಲರ ಈ ನಡೆಗೆ ಕಾಂಗ್ರೆಸ್ ಸದಸ್ಯರು ತಕ್ಷಣವೇ ವಿರೋಧ ವ್ಯಕ್ತಪಡಿಸಿ ಸದನದ ಒಳಗೇ ಘೋಷಣೆಗಳನ್ನು ಕೂಗಿದರು.

ಭಾಷಣದ ಆರಂಭದಲ್ಲೇ ನರೇಗಾ ಯೋಜನೆಯ ಉಲ್ಲೇಖ ಬಂದ ಕ್ಷಣದಲ್ಲೇ ರಾಜ್ಯಪಾಲರು ಮಾತನ್ನು ನಿಲ್ಲಿಸಿ ಭಾಷಣ ಮುಂದುವರಿಸದೇ ನಿರ್ಗಮಿಸಿದರು. ಕಾನೂನು ಸಂಘರ್ಷಕ್ಕೆ ಅವಕಾಶ ನೀಡಬಾರದೆಂಬ ಕಾರಣದಿಂದ ಅವರು ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ, ಅದರ ಪ್ರತಿಯನ್ನು ಮಾತ್ರ ಸದನದ ಮೇಜಿನ ಮೇಲೆ ಇಟ್ಟು ವಿಧಾನಸೌಧದಿಂದ ಹೊರಟು ಹೋದರು. ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸದೇ ಇದ್ದರೆ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ಸಿದ್ಧವಾಗಿತ್ತು ಎಂಬ ಮಾಹಿತಿ ಹೊರಬಂದಿತ್ತು.

ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಬರುವುದು ಖಚಿತವಾಗಿದ್ದರೂ, ಸರ್ಕಾರದ ಪರವಾಗಿ ಸಿದ್ಧಪಡಿಸಿದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದುತ್ತಾರೆಯೇ ಎಂಬುದೇ ಪ್ರಮುಖ ಪ್ರಶ್ನೆಯಾಗಿತ್ತು. ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ 11 ಪ್ರಮುಖ ಪ್ಯಾರಾಗಳು ಇದ್ದು, ಅವುಗಳಲ್ಲಿ ಸರ್ಕಾರದ ಸಾಧನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಜನಪರ ಯೋಜನೆಗಳ ಉಲ್ಲೇಖವಿತ್ತು.

ಸಾಮಾನ್ಯವಾಗಿ ಸಂವಿಧಾನದ ಪ್ರಕಾರ ರಾಜ್ಯಪಾಲರು ಸರ್ಕಾರದ ಸಲಹೆಯಂತೆ ಈ ಭಾಷಣವನ್ನು ಓದಬೇಕು. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಕೇಂದ್ರ–ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯಪಾಲರು ಭಾಷಣವನ್ನು ಸಂಪೂರ್ಣವಾಗಿ ಓದದೇ ನಿರ್ಗಮಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಹೈಡ್ರಾಮಾ..!

ರಾಜ್ಯಪಾಲರು ಭಾಷಣ ಮಾಡದೇ ಹೊರಟು ಹೋದ ಬೆನ್ನಲ್ಲೇ ಜಂಟಿ ಅಧಿವೇಶನದಲ್ಲಿ ಗದ್ದಲ ಉಂಟಾಯಿತು. ಕಾಂಗ್ರೆಸ್ ಸದಸ್ಯರು ಇದನ್ನು ಸಂವಿಧಾನ ವಿರೋಧಿ ನಡೆ ಎಂದು ಆರೋಪಿಸಿ ರಾಜ್ಯಪಾಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸದನದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ತಯಾರಿಸಿದ ಭಾಷಣವನ್ನು ಓದದೇ ರಾಜ್ಯಪಾಲರು ತಮ್ಮದೇ ಭಾಷಣವನ್ನು ಓದಿರುವುದು ಸಂವಿಧಾನ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದರು.

ರಾಜ್ಯಪಾಲರು ಕೇಂದ್ರ ಸರ್ಕಾರದ ಸೂಚನೆಯಂತೆ ವರ್ತಿಸುತ್ತಿದ್ದು, ರಾಜ್ಯ ಸರ್ಕಾರದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಪಾಲ–ಸರ್ಕಾರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.