ಬೆಂಗಳೂರು : ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಮೊದಲ ರನ್ನರ್ಅಪ್ ಆಗಿ ಹೊರಹೊಮ್ಮಿದ ನಂತರ ರಕ್ಷಿತಾ ಶೆಟ್ಟಿ ಅವರ ಜೀವನ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ದೊಡ್ಮನೆಯಿಂದ ಹೊರಬಂದ ಕ್ಷಣದಿಂದಲೇ ಸಂದರ್ಶನಗಳು, ಇವೆಂಟ್ಗಳು ಮತ್ತು ಗಣ್ಯರ ಭೇಟಿಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಈ ಮಧ್ಯೆಯೇ ಅವರು ಕಿಚ್ಚ ಸುದೀಪ್ ಬಗ್ಗೆ ಭಾವುಕವಾದ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೆಲವರು ಕೇವಲ ಮಾರ್ಗದರ್ಶನ ನೀಡುವುದಲ್ಲ, ಇಡೀ ಜಗತ್ತು ನಿಮ್ಮನ್ನು ಪ್ರಶ್ನಿಸುವಾಗ ನಿಮ್ಮ ಪರವಾಗಿ ನಿಂತುಕೊಳ್ಳುತ್ತಾರೆ ಎಂದು ಹೇಳಿರುವ ರಕ್ಷಿತಾ, ಬಿಗ್ಬಾಸ್ ಪ್ರಯಾಣದ ಕಡೆಯವರೆಗೂ ಸುದೀಪ್ ತಂದೆಯ ಸಮಾನವಾಗಿ ತನ್ನ ಜೊತೆಗಿದ್ದರು ಎಂದು ತಿಳಿಸಿದ್ದಾರೆ.
ತಾನು ಸರಿಯಾಗಿದ್ದಾಗ ಕೋಟಿ ಜನರ ಮುಂದೆ ತನ್ನ ಪರವಾಗಿ ದೃಢವಾಗಿ ನಿಂತು ಬೆಂಬಲಿಸಿದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದಾರೆ.
ಒಳ್ಳೆಯದನ್ನು ಮಾಡಿದಾಗ ಹೆಮ್ಮೆಯಿಂದ ಪ್ರೋತ್ಸಾಹಿಸಿದ ಅವರು, ತಪ್ಪು ಮಾಡಿದಾಗ ನಿಜವಾದ ಹಿತೈಷಿಯಂತೆ ಕಠಿಣವಾಗಿಯೂ ಆದರೆ ಅಷ್ಟೇ ಕಾಳಜಿಯಿಂದ ತಿದ್ದಿದರು ಎಂದು ರಕ್ಷಿತಾ ಹೇಳಿದ್ದಾರೆ. ಕೆಲ ಸಂದರ್ಭಗಳಲ್ಲಿ ತನ್ನ ವರ್ತನೆಯೇ ತನ್ನ ವಿರುದ್ಧವಾಗಿ ಕೆಲಸ ಮಾಡಿದಾಗಲೂ ಸುದೀಪ್ ನೇರವಾಗಿ ಸತ್ಯ ಹೇಳಿ ಆತ್ಮವಿಶ್ವಾಸ ತುಂಬಿದರು ಎಂದು ಬರೆದಿದ್ದಾರೆ.
“ನೀನು ಇದಕ್ಕಿಂತಲೂ ಬಲಿಷ್ಠಳು” ಎಂದು ಕಣ್ಣಲ್ಲಿ ಕಣ್ಣಿಟ್ಟು ಹೇಳಿದ ಅವರ ಆ ಮಾತುಗಳು ತನ್ನನ್ನು ಬದಲಿಸಿದವು ಎಂದು ರಕ್ಷಿತಾ ಒಪ್ಪಿಕೊಂಡಿದ್ದಾರೆ. ತಾನೇ ತನ್ನ ಶತ್ರುವಾಗಿದ್ದ ಕ್ಷಣಗಳಲ್ಲಿ ಸಹ ದಾರಿ ತೋರಿದ ಮಾರ್ಗದರ್ಶಕ ಸುದೀಪ್ ಎಂದು ಅವರು ಕೊಂಡಾಡಿದ್ದಾರೆ.
ಬಿಗ್ಬಾಸ್ನಲ್ಲಿ ಮೊದಲ ರನ್ನರ್ಅಪ್ ಸ್ಥಾನ ಪಡೆದಿದ್ದು ಕೇವಲ ತನ್ನ ಸಾಧನೆಯಲ್ಲ, ಅದರಲ್ಲಿ ಸುದೀಪ್ ಅವರ ಶ್ರಮ, ಬೆಂಬಲ ಮತ್ತು ತನ್ನ ಮೇಲಿನ ಅವರ ನಂಬಿಕೆ ಅಡಗಿದೆ ಎಂದು ರಕ್ಷಿತಾ ತಿಳಿಸಿದ್ದಾರೆ. ಅತ್ಯಂತ ಅಗತ್ಯವಾದ ಸಮಯದಲ್ಲಿ ತನ್ನ ಪಕ್ಕದಲ್ಲಿ ನಿಂತಿದ್ದಕ್ಕಾಗಿ ಅವರಿಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ತನ್ನನ್ನು ರಕ್ಷಿಸಿ, ಬೆಂಬಲಿಸಿ, ಒಬ್ಬ ತಂದೆಯಂತೆ ಕಾಳಜಿಯಿಂದ ನಡೆಸಿಕೊಂಡ ಸುದೀಪ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಬರೆದಿರುವ ರಕ್ಷಿತಾ, ಈ ಕೃತಜ್ಞತೆ ಮತ್ತು ಪ್ರೀತಿಯನ್ನು ಜೀವನಪೂರ್ಣ ಹೃದಯದಲ್ಲಿ ಹೊತ್ತು ಸಾಗುತ್ತೇನೆ ಎಂದು ಹೇಳಿದ್ದಾರೆ.










