ಬೆಂಗಳೂರು: ಕ್ಲಾಸ್​ನಲ್ಲಿ ಲೆಕ್ಚರರ್​​ನಿಂದ ಅವಮಾನ​​- ದುಡುಕಿನ ನಿರ್ಧಾರದಿಂದ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ

ಬೆಂಗಳೂರು: ಪ್ರತಿಷ್ಠಿತ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ (Oxford Dental College) ವಿದ್ಯಾರ್ಥಿನಿಗೆ ನಡೆದ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. 23 ವರ್ಷದ ಯಶಸ್ವಿನಿ ಮೃತ ಡೆಂಟಲ್ ವಿದ್ಯಾರ್ಥಿನಿ.

ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರಿಂದ ನಿರಂತರ ಕಿರುಕುಳ ನೀಡಿದ್ದರಿಂದಲೇ ನನ್ನ ಮಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಯಶಸ್ವಿನಿ ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಪರಿಮಳ–ಭೋದೆವಯ್ಯ ದಂಪತಿಯ ಒಬ್ಬಳೇ ಮಗಳು ಯಶಸ್ವಿನಿ. ಅವರು Oral Medicine and Radiology ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಸೆಮಿನಾರ್‌ಗೆ ಅವಕಾಶ ನೀಡದೇ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.

ಪೋಷಕರ ಆರೋಪ ಏನು?

ಕಣ್ಣು ನೋವಿನ ಹಿನ್ನೆಲೆಯಲ್ಲಿ ಬುಧವಾರ ಕಾಲೇಜಿಗೆ ಹೋಗಿರಲಿಲ್ಲ. ಮಾರನೇ ದಿನ ಕಾಲೇಜಿಗೆ ಹೋದಾಗ ವಿದ್ಯಾರ್ಥಿಗಳ ಮುಂದೆಯೇ ಪ್ರಾಧ್ಯಾಪಕರು ಅವಮಾನ ಮಾಡಿದ್ದಾರೆ.

“ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡೆಯಾ?” ಎಂದು ಪ್ರಶ್ನಿಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಸ್ನೇಹಿತರ ಮುಂದೆ ನಡೆದ ಈ ಅವಮಾನವನ್ನು ತಾಳಲಾರದೇ ಮಗಳು ಜೀವ ಕಳೆದುಕೊಂಡಿದ್ದಾಳೆ ಎಂದು ಹೆತ್ತವರು ಕಣ್ಣೀರಿಟ್ಟಿದ್ದಾರೆ.

ಈ ಪ್ರಕರಣದಲ್ಲಿ ಕಿರುಕುಳ ನೀಡಿದ ಪ್ರಾಂಶುಪಾಲ ಹಾಗೂ ಅವಮಾನಿಸಿದ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಪೋಷಕರ ಪ್ರತಿಭಟನೆಗೆ ಯಶಸ್ವಿನಿಯ ಸಹಪಾಠಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.