ಬೇಲೂರು : ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌

ಬೇಲೂರು :  ಪೊಲೀಸರ ಚುರುಕು ಕಾರ್ಯಾಚರಣೆ: 30 ಲಕ್ಷ ಚಿನ್ನಾಭರಣದೊಂದಿಗೆ ಪರಾರಿ ಯತ್ನ ಭಗ್ನ ,ತನ್ನ ಕೊಲೆಯಾಗಿದೆ ಎಂದು ಬಿಂಬಿಸಿ, ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಪ್ರಿಯಕರ ಡೇವಿಡ್ ಜೊತೆ ಪರಾರಿಯಾಗಲು ಪ್ರಿಯಾಂಕಾ ಸೂಕ್ಷ್ಮವಾಗಿ ಪ್ಲಾನ್ ರೂಪಿಸಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಫೆಬ್ರವರಿ 12ರ ರಾತ್ರಿ ನಾಪತ್ತೆಯಾಗಿದ್ದ ಆಕೆ, ಮನೆಯವರಿಗೂ ಪೊಲೀಸಿಗೂ ಆತ್ಮಹತ್ಯೆ ಅನುಮಾನ ಮೂಡುವಂತೆ ವಾತಾವರಣ ಸೃಷ್ಟಿಸಿ ನೇರವಾಗಿ ಕುಣಿಗಲ್‌ಗೆ ತೆರಳಿದ್ದಳು. ರಾತ್ರಿ ಸುಮಾರು 12 ಗಂಟೆಗೆ ಕುಣಿಗಲ್ ತಲುಪಿದ ಪ್ರಿಯಾಂಕಾಳನ್ನು ಡೇವಿಡ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು.

ಇಬ್ಬರೂ ಪೂರ್ವಯೋಜಿತವಾಗಿ ಸಂಚು ರೂಪಿಸಿದ್ದರೆಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟವಾಗಿದೆ. ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೊರಟಿದ್ದ ಡೇವಿಡ್, ರಾತ್ರಿ ಪ್ರಿಯಾಂಕಾ ಜೊತೆ ಮನೆಗೆ ಬಂದಿರುವುದು ದಾಖಲಾಗಿದೆ. ಅಲ್ಲದೆ, ಮನೆಯಲ್ಲಿದ್ದ ಪ್ರಿಯಾಂಕಾಗೆ ಹೋಟೆಲ್‌ನಿಂದ ಊಟ ತಂದುಕೊಟ್ಟ ದೃಶ್ಯಗಳೂ ಆ ಪ್ರದೇಶದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಎಲ್ಲಾ ಚಲನವಲನಗಳು ಪ್ರಕರಣದ ತನಿಖೆಗೆ ಮಹತ್ವದ ಸುಳಿವು ನೀಡಿವೆ.

ಇನ್ನೂ ಮುಂದೆ, ಇಬ್ಬರೂ ಶನಿವಾರ ಬೆಳಗ್ಗೆ ಬಿಹಾರಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಚಿನ್ನಾಭರಣಗಳನ್ನು ತೆಗೆದುಕೊಂಡು ಹೊಸ ಜೀವನ ಆರಂಭಿಸಲು ಯತ್ನಿಸಿದ್ದರೆಂಬ ಮಾಹಿತಿ ಹೊರಬಂದಿದೆ. ಆದರೆ, ಟವರ್ ಡಂಪ್ ಮತ್ತು ಮೊಬೈಲ್ ನೆಟ್‌ವರ್ಕ್ ಲೊಕೇಶನ್ ಆಧರಿಸಿ ಹಾದಿ ಪತ್ತೆಹಚ್ಚಿದ ಬೇಲೂರು ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಕುಣಿಗಲ್‌ಗೆ ದೌಡಾಯಿಸಿದ್ದಾರೆ.

ಪೊಲೀಸರು ಮನೆ ಮುಂದೆ ತಲುಪುವಷ್ಟರಲ್ಲಿ ಪ್ರಿಯಾಂಕಾ ಹೊರಬಂದಿದ್ದಾಳೆ ಎನ್ನಲಾಗಿದೆ. ಸ್ವಲ್ಪ ತಡವಾಗಿದ್ದರೆ ಇಬ್ಬರೂ ಬಿಹಾರದತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ರಾತ್ರಿಯೇ ಹಾಸನಕ್ಕೆ ಕರೆದುಕೊಂಡು ಬಂದು ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಡೇವಿಡ್ ಅನ್ನು ಕುಣಿಗಲ್‌ಗೆ ಹಿಂತಿರುಗಲು ಅವಕಾಶ ನೀಡಲಾಗಿದೆ. ಪತಿಯೊಂದಿಗೆ ತೆರಳಲು ನಿರಾಕರಿಸಿದ ಪ್ರಿಯಾಂಕಾಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಇನ್ನಷ್ಟು ಕಾನೂನು ಕ್ರಮಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.