ಹಾಸನ : “ನಾನು ಮತ್ತೆ ಗಂಡನ ಜೊತೆ ಹೋಗುವುದಿಲ್ಲ” ಎಂದು ಹೈಡ್ರಾಮ ರಾಣಿ ಪೊಲೀಸರ ಮುಂದೆ ಮತ್ತೊಂದು ನೌಟಂಕಿ ನಾಟಕ

ಹಾಸನ : ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದ ಪ್ರಿಯಾಂಕಾ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಕೆರೆಯ ಬಳಿಯಲ್ಲಿ ಆಕೆಯ ಚಪ್ಪಲಿ ಹಾಗೂ ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದರಿಂದ ಆತ್ಮಹತ್ಯೆ ಅನುಮಾನ ವ್ಯಕ್ತವಾಗಿತ್ತು.

ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದು, ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಕೇವಲ 10 ಗಂಟೆಗಳೊಳಗೆ ಪೊಲೀಸರು ಪ್ರಕರಣದ ಸತ್ಯಾಂಶವನ್ನು ಬಯಲಿಗೆಳೆದಿದ್ದಾರೆ.

ಮಿಸ್ಸಿಂಗ್ ಡ್ರಾಮಾ: ಡೇವಿಡ್ ಮನೆಯಲ್ಲಿ ಪತ್ತೆ

ತನಿಖೆ ವೇಳೆ ಪ್ರಿಯಾಂಕಾ ಕುಣಿಗಲ್ ಭಾಗದಲ್ಲಿರುವ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿರುವುದು ಪತ್ತೆಯಾಯಿತು. ಪೊಲೀಸರು ಇಬ್ಬರನ್ನೂ ಹಾಸನ ಪೊಲೀಸ್ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ್ಮಹತ್ಯೆ ನಾಟಕವಾಡಿ ಹೊಸ ಜೀವನ ಆರಂಭಿಸಲು ಯೋಜನೆ ರೂಪಿಸಿದ್ದುದಾಗಿ ಬೆಳಕಿಗೆ ಬಂದಿದೆ. ತಾನು ಸತ್ತಂತೆ ತೋರಿಸಿ ಬೇರೆ ರಾಜ್ಯಕ್ಕೆ ತೆರಳಿ ಡೇವಿಡ್ ಜೊತೆ ಬದುಕಲು ಆಕೆ ಪ್ಲಾನ್ ಮಾಡಿದ್ದಳು ಎಂಬ ಮಾಹಿತಿ ದೊರೆತಿದೆ.

ಗಂಡನೊಂದಿಗೆ ಹೋಗಲು ನಿರಾಕರಣೆ

ಪ್ರಿಯಾಂಕಾಳ ಪತಿ ರುದ್ರೇಶ್ ಜೊತೆ ಸಂಸಾರ ನಡೆಸಲು ಇಷ್ಟವಿಲ್ಲವೆಂದು ಆಕೆ ಪೊಲೀಸರ ಮುಂದೆ ಸ್ಪಷ್ಟಪಡಿಸಿದ್ದಾಳೆ. “ನಾನು ಮತ್ತೆ ಗಂಡನ ಮನೆಗೆ ಹೋಗುವುದಿಲ್ಲ” ಎಂದು ಹಠ ಹಿಡಿದಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಪೊಲೀಸರ ಸಮ್ಮುಖದಲ್ಲಿ ಸಮಾಲೋಚನೆ ನಡೆದರೂ ಆಕೆ ನಿರ್ಧಾರ ಬದಲಿಸಿಲ್ಲ.

ಸಾಂತ್ವನ ಕೇಂದ್ರಕ್ಕೆ ಕಳುಹಿಸಿ

ಪತಿ ಜೊತೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಿಯಾಂಕಾಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇತ್ತ, ಹಲವು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಡೇವಿಡ್ ನಂತರ ಮೌನವಾಗಿ ಕುಣಿಗಲ್‌ಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.

ಅಕ್ರಮ ಸಂಬಂಧದ ಹಿನ್ನೆಲೆ

ಪ್ರಿಯಾಂಕಾ ಮತ್ತು ರುದ್ರೇಶ್ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲೇ ಡೇವಿಡ್ ಮ್ಯಾನೇಜರ್ ಆಗಿದ್ದನು. ಮದುವೆಯಾದ ನಂತರವೂ ಪ್ರಿಯಾಂಕಾ ಡೇವಿಡ್ ಜೊತೆ ಆಪ್ತ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಈ ಸಂಬಂಧವೇ ಮಿಸ್ಸಿಂಗ್ ಡ್ರಾಮಾಕ್ಕೆ ಕಾರಣವಾಗಿದ್ದು, ಆತ್ಮಹತ್ಯೆ ನಾಟಕವಾಡಿ ಹೊಸ ಜೀವನ ಆರಂಭಿಸಲು ಯತ್ನಿಸಿದ್ದಳು. ಆದರೆ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಆಕೆಯ ಪ್ಲಾನ್ ಭಂಗವಾಗಿದೆ.