ಬೆಂಗಳೂರು: ‘ಗಾಂಧಾರಿ’, ‘ರಾಧಾ ರಮಣ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದ ನಟಿ ಕಾವ್ಯಾ ಗೌಡ ಇತ್ತೀಚೆಗೆ ಬಣ್ಣದ ಲೋಕದಿಂದ ಸ್ವಲ್ಪ ದೂರ ಉಳಿದು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಲ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಕಾವ್ಯಾ ಗೌಡ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ನಟಿ ಕಾವ್ಯಾ ಗೌಡ ಅವರು ಕೆಲವು ವರ್ಷಗಳ ಹಿಂದೆ ಉದ್ಯಮಿ ಸೋಮಶೇಖರ್ ಅವರನ್ನು ವಿವಾಹವಾಗಿದ್ದರು. ಸೋಮಶೇಖರ್ ಹಾಗೂ ನಂದೀಶ್ ಸಹೋದರರು. ಸೋಮಶೇಖರ್–ಕಾವ್ಯಾ ದಂಪತಿ ಹಾಗೂ ನಂದೀಶ್–ಪ್ರೇಮಾ ದಂಪತಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕಾವ್ಯಾ ಹಾಗೂ ಪ್ರೇಮಾ ನಡುವೆ ಮನಸ್ತಾಪ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತೀಚೆಗೆ ಕಾವ್ಯಾ ಹಾಗೂ ಪ್ರೇಮಾ ಸಂಬಂಧಿಕರು ಮನೆಗೆ ಆಗಮಿಸಿದ ವೇಳೆ ಗಲಾಟೆ ನಡೆದಿದೆ. ಈ ಸಂದರ್ಭ ಸಂಬಂಧಿ ರವಿಕುಮಾರ್ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ನಟಿ ಕಾವ್ಯಾ ಗೌಡಗೆ ‘ನಿನ್ನನ್ನು ರೇಪ್ ಮಾಡ್ತೇನೆ’ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾವ್ಯಾ ಮೇಲೂ ಹಲ್ಲೆ ನಡೆದಿರುವ ಆರೋಪ ಇದೆ.
ಗಾಯಗೊಂಡ ಸೋಮಶೇಖರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಸಂಬಂಧ ಕಾವ್ಯಾ ಗೌಡ ಅವರ ಅಕ್ಕ ಭವ್ಯಾ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರೇಮಾ, ನಂದೀಶ್, ಪ್ರಿಯಾ ಹಾಗೂ ರವಿಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ.
ರೇಪ್ ಬೆದರಿಕೆಯಿಂದಾಗಿ ಕಾವ್ಯಾ ಗೌಡ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದು, ಅವರಿಗೆ ಮಾನಸಿಕ ಹಿಂಸೆ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಟುಂಬದ ಒಳ ಕಲಹ ಬೀದಿಗೆ ಬಂದಿರುವ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.










