ಅರಸೀಕೆರೆ: ತಾಲ್ಲೂಕಿನ ಬಕಪ್ಪನಕೊಪ್ಪಲು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಜಗಳ ಹೊಡೆದಾಟಕ್ಕೆ ತಿರುಗಿದ್ದು, ಎರಡೂ ಕಡೆಯವರು ಪರಸ್ಪರ ಕಲ್ಲು–ದೊಣ್ಣೆಗಳಿಂದ ಬಡಿದಾಡಿರುವ ಘಟನೆ ನಡೆದಿದೆ.
ಜಾನುವಾರು ಕಟ್ಟುವ ವಿಚಾರಕ್ಕೆ ಆರಂಭವಾದ ಗಲಾಟೆ:
ಕಳೆದ ನಾಲ್ಕು ದಿನಗಳ ಹಿಂದೆ ಮೀನಾಕ್ಷಿ ಹಾಗೂ ಸೋಮಶೇಖರ್ ನಡುವೆ ಜಾನುವಾರು ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಈ ವಿಚಾರ ಮರುಕಳಿಸಿ ಕುಟುಂಬಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿ, ಜಗಳ ಹಿಂಸಾತ್ಮಕ ರೂಪ ಪಡೆದಿದೆ.
ಸೋಮಶೇಖರ್, ಪ್ರಕಾಶ್, ದರ್ಶನ್, ಪ್ರಸಾದ್, ಶಾಂತಮ್ಮ, ಲಲಿತಾ ಮತ್ತು ಪವಿತ್ರ ಅವರು ಮೀನಾಕ್ಷಿ, ರಕ್ಷಿತಾ, ಸುಚಿತ್ರಾ, ಮಾನಸ, ಭುವನಾಕ್ಷಮ್ಮ, ಸೌಂದರ್ಯ ಇವರ ಮೇಲೆ
ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಮನೆಗಳ ಮೇಲೂ ಕಲ್ಲು ತೂರಾಟ ನಡೆದು, ಮನೆಯ ಕಿಟಕಿಗಳ ಗ್ಲಾಸ್ ಒಡೆದು ಹಾನಿ ಮಾಡಲಾಗಿದೆ ಎನ್ನಲಾಗಿದೆ.
ಹಲವರಿಗೆ ಗಾಯ:
ಈ ಗಲಾಟೆಯಲ್ಲಿ ರಕ್ಷಿತಾ, ಸುಚಿತ್ರಾ, ಮಾನಸ, ಭುವನಾಕ್ಷಮ್ಮ ಮತ್ತು ಸೌಂದರ್ಯ ಗಾಯಗೊಂಡಿದ್ದಾರೆ.
ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಎರಡು ಕುಟುಂಬಗಳಿಂದಲೂ ದೂರು–ಪ್ರತಿದೂರು ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










