ಸಕಲೇಶಪುರ : ನಿಯಮಗಳನ್ನು ಉಲ್ಲಂಘನೆ ಮಾಡಿ ದಂಡವನ್ನು ಕಟ್ಟಬೇಕಾಗಿರುವ ವಾಹನಗಳ ಮಾಲೀಕರಿಗೆ ಶೇ.50% ನಷ್ಟು ದಂಡದಿಂದ ವಿನಾಯಿತಿ ನೀಡಲಾಗುತ್ತಿದ್ದು ಇದನ್ನು ದಂಡ ಕಟ್ಟಬೇಕಾಗಿರುವ ವಾಹನಗಳ ಮಾಲೀಕರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಎ.ಆರ್.ಟಿ.ಓ ಸರಸ್ವತಿ ಹೇಳಿದರು.
ಪಟ್ಟಣದ ಎ.ಆರ್.ಟಿ.ಓ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ರ ಅವಧಿಯಲ್ಲಿ ಮೋಟಾರು ವಾಹನ ಕಾಯಿದೆ / ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿ, ಬಾಕಿ ಇರುವ ಡಿ.ಎಸ್.ಎ (ಇಲಾಖಾ ಶಾಸನ) ಪ್ರಕರಣಗಳ ದಂಡದ ಮೊತ್ತದಲ್ಲಿ 50% (ಶೇ. ಐವತ್ತರಷ್ಟು ಮಾತ್ರ) ಪಾವತಿ ಮಾಡಲು ದಿನಾಂಕ: 21.11.2025 ರಿಂದ 12.12.2025 ವರೆಗೆ ಕಾಲಾವಕಾಶ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.
ಇದರಿಂದ ವಾಹನಗಳ ಮಾಲೀಕರು ದಂಡವನ್ನು ಕಟ್ಟಬೇಕಾದ ಪ್ರಮಾಣದಲ್ಲಿ ಶೇ.50% ರಷ್ಟು ಉಳಿತಾಯವಾಗುತ್ತದೆ.ಈ ನಿಟ್ಟಿನಲ್ಲಿ ವಾಹನ ಮಾಲೀಕರುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು










