ಹಾಸನ–ಅರಕಲಗೂಡು ರಸ್ತೆ ಕಟ್ಟಾಯ ಅರಣ್ಯ ಪ್ರದೇಶದಲ್ಲಿ ಮರ ಉರುಳಿ ಸಂಚಾರ ಅಸ್ತವ್ಯಸ್ತ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ

ಅರಕಲಗೂಡು–ಹಾಸನ ನಡುವಿನ ಕಟ್ಟಾಯ ಅರಣ್ಯ ಪ್ರದೇಶದಲ್ಲಿ ಮರ ಉರುಳಿ ಬಿದ್ದು, ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ ವ್ಯಕ್ತವಾಗಿದೆ.

ಹಾಸನ | ಫೆಬ್ರವರಿ 5, 2026

ಅರಕಲಗೂಡು–ಹಾಸನ ನಡುವಿನ ಕಟ್ಡಾಯ ಅರಣ್ಯ ಪ್ರದೇಶದಲ್ಲಿ ದುಷ್ಕರ್ಮಿಗಳು  ಬುಡಕ್ಕೆ ಬೆಂಕಿ ಹಾಕಿದ್ದರಿಂದ ಸುಟ್ಟು ಹೋಗಿರುವ ಹೆಮ್ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ಆದರೆ ಬೆಳಗಿನ ಜಾವದಿಂದಲೇ ರಸ್ತೆ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಯಿತು.

ಮರ ರಸ್ತೆಗೆ ಬಿದ್ದಿದ್ದರಿಂದ ಅರಕಲಗೂಡು–ಹಾಸನ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು, ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಕರು ರಸ್ತೆಯಲ್ಲೇ ಸಿಲುಕಿಕೊಂಡರು. ಶಾಲಾ ವಾಹನಗಳು, ಸಾರ್ವಜನಿಕ ಸಾರಿಗೆ ಬಸ್ಸುಗಳು, ಖಾಸಗಿ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು.

ಮರ ಉರುಳಿದ ಬಗ್ಗೆ ಮಾಹಿತಿ ಇದ್ದರೂ ಸಹ, ಅರಣ್ಯ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ಮರ ತೆರವು ಕಾರ್ಯ ಕೈಗೊಳ್ಳದಿರುವುದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ಹೊರಹಾಕಿದರು.

“ಕಟ್ಟಾಯ ಅರಣ್ಯ ಪ್ರದೇಶದಲ್ಲಿ ಈ ರೀತಿಯ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಈ ರಸ್ತೆ ಬಂದ್ ಆದರೆ ಭಾರಿ ಅನಾಹುತ ಸಂಭವಿಸಬಹುದು” ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಮರ ತೆರವು ಕಾರ್ಯ ವಿಳಂಬವಾಗಿರುವುದರಿಂದ ಪರ್ಯಾಯ ಮಾರ್ಗಗಳಲ್ಲೂ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಇಡೀ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.