Arasikere: ಮಾಡಾಳು ಗ್ರಾಮದಲ್ಲಿ ₹1 ಕೋಟಿ ವೆಚ್ಚದ ಸ್ವರ್ಣ ಗೌರಮ್ಮ ದೇವಾಲಯ: ಶ್ರಾವಣ ಪಂಚಮಿಗೆ ಲೋಕಾರ್ಪಣೆ-ಕೋಡಿಮಠ ಶ್ರೀ

165 ವರ್ಷಗಳ ಇತಿಹಾಸ ಹೊಂದಿದ ದೇವಿ ಸನ್ನಿಧಿ – ಭಕ್ತರ ಸಂಕಷ್ಟ ನಿವಾರಕ ಶಕ್ತಿ ಎಂದು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯ

Arasikere ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ 165 ವರ್ಷಗಳ ಇತಿಹಾಸ ಹೊಂದಿರುವ ಸ್ವರ್ಣ ಗೌರಮ್ಮ ದೇವಾಲಯದ ನೂತನ ಕಟ್ಟಡ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 2026 ಶ್ರಾವಣ ಪಂಚಮಿಗೆ ಲೋಕಾರ್ಪಣೆ ನಡೆಯಲಿದೆ.

Arasikere|ಅರಸೀಕೆರೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದಲ್ಲಿ ಕಳೆದ 165 ವರ್ಷಗಳಿಂದ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಾಲಯ ಸನ್ನಿಧಿಯು ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ದೇವತೆಯಾಗಿ ಕಂಗೊಳಿಸುತ್ತಿದೆ ಎಂದು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಸ್ವಾಮೀಜಿಗಳು, ಗ್ರಾಮದ ಚನ್ನಬಸವೇಶ್ವರ ಚಿತ್ರಮಂದಿರದ ಪಕ್ಕದಲ್ಲಿ ಕೋಡಿಮಠ ಮಹಾಸಂಸ್ಥಾನ ವತಿಯಿಂದ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ದೇವಾಲಯ ಕಾಮಗಾರಿಯನ್ನು ಖುದ್ದು ವೀಕ್ಷಿಸಿದರು. ಬಳಿಕ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ವರ್ಷ 2026ರಲ್ಲಿ ನಡೆಯಲಿರುವ ಶ್ರಾವಣ ಪಂಚಮಿ ಸಂದರ್ಭದಲ್ಲಿ ನೂತನ ದೇವಾಲಯದ ಲೋಕಾರ್ಪಣೆ ನಡೆಯಲಿದ್ದು, ಅದಕ್ಕೂ ಮುನ್ನ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಿಲ್ಪಿ ಹಾಗೂ ಗುತ್ತಿಗೆದಾರ ವಿನಾಯಕ ಅವರಿಗೆ ಸೂಚಿಸಿದರು. ದೇವಾಲಯ ನಿರ್ಮಾಣಕ್ಕೆ ಮಠದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮೂಗುತಿ ಸುಂದರಿ ಶ್ರೀ ಸ್ವರ್ಣ ಗೌರಮ್ಮ ದೇವಿಯ ಮಹಿಮೆಯನ್ನು ವಿವರಿಸಿದ ಸ್ವಾಮೀಜಿಗಳು, ಕೋಡಿಮಠದಲ್ಲಿ ಯೋಗ ಸಮಾಧಿಯಲ್ಲಿರುವ ಮಹಾ ತಪಸ್ವಿ ಹಾಗೂ ಪವಾಡ ಪುರುಷರಾದ ಶ್ರೀ ಶಿವಲಿಂಗ ಸ್ವಾಮಿಗಳು ಒಂದು ಕೋಟಿ ಜಪಗಳಿಂದ ಸಿದ್ಧಿಯಾದ ಬಂಗಾರದ ಮೂಗುತಿಯನ್ನು ದೇವಿಗೆ ಆಶೀರ್ವದಿಸಿದ್ದು, ಅದನ್ನು ಧರಿಸಿದರೆ ಸಾಕ್ಷಾತ್ ಪಾರ್ವತಿ ರೂಪವಾಗಿ ದೇವಿ ಕಂಗೊಳಿಸುತ್ತಾಳೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜು, ಗೌರವಾಧ್ಯಕ್ಷ ಎಸ್. ಮಲ್ಲಿಕಾರ್ಜುನಪ್ಪ, ಕೋಡಿಮಠದ ಏಜೆಂಟ್ ಮಹದೇವಪ್ಪ ಸೇರಿದಂತೆ ಹಲವಾರು ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.