ಹಾಸನ: ಪತ್ರಕರ್ತರಿಗೆ ನಿವೇಶನ ನೀಡಲು ಕಾನೂನುಗಳನ್ನು ಸಡಿಲಗೊಳಿಸಬೇಕು ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸಿದರು.
ಇಲ್ಲಿ ನಡೆದ ಮಾಧ್ಯಮ ದಿನಾಚರಣೆ – 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮ ತಾತ್ಕಾಲಿಕವಾಗಿದ್ದು, ಮುದ್ರಣ ಮಾಧ್ಯಮವೇ ಭವಿಷ್ಯದಲ್ಲಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಗೃಹ ಮಂಡಳಿಯಲ್ಲಿ ಸುಮಾರು 6,500 ನಿವೇಶನಗಳು ಲಭ್ಯವಿದ್ದು, ಅವುಗಳನ್ನು ಹಂಚಿಕೆ ಮಾಡುವ ಅಧಿಕಾರ ಸಚಿವ ಸಂಪುಟಕ್ಕೆ ಮಾತ್ರ ಇದೆ. ಈ ಕಾನೂನನ್ನು ಸಡಿಲಿಸಿ ಪತ್ರಕರ್ತರಿಗೆ ನಿವೇಶನ ನೀಡುವಂತೆ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರಕರ್ತರ ಮೇಲೆ ವಿಶೇಷ ಕಾಳಜಿ ಇದೆ ಎಂದೂ ಅವರು ತಿಳಿಸಿದರು.
ಡಿಜಿಟಲ್ ಮಾಧ್ಯಮವು ಜನರನ್ನು ಖುಷಿಪಡಿಸುವ ಜೊತೆಗೆ ಸಮಸ್ಯೆಗಳನ್ನೂ ಸೃಷ್ಟಿಸುತ್ತಿದೆ. ಅತಿಯಾದ ಹೊಗಳಿಕೆ ಅಥವಾ ಟೀಕೆ ಸರಿಯಲ್ಲ, ಇದರಿಂದ ಸಮಸ್ಯೆಗಳೇ ಹೆಚ್ಚಾಗುತ್ತವೆ. ತಾವು ಈಗಲೂ ಸಂಪಾದಕೀಯವನ್ನು ಓದುತ್ತಿದ್ದು, ಮುದ್ರಣ ಮಾಧ್ಯಮವನ್ನು ಮಾತ್ರ ನಂಬುವುದಾಗಿ ಹೇಳಿದರು. “ನಕಲಿ ಸುದ್ದಿಗಳನ್ನು ನಿಲ್ಲಿಸದೇ ಇದ್ದರೆ ಅನೇಕ ಜನರಿಗೆ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಾರೆ. ಅದಕ್ಕೇ ನಾನು ಕೀಪ್ಯಾಡ್ ಮೊಬೈಲ್ ಇಟ್ಟುಕೊಂಡಿದ್ದೇನೆ” ಎಂದು ತಮ್ಮ ಗ್ರಾಮೀಣ ಶೈಲಿಯಲ್ಲಿ ಹಾಸ್ಯಭರಿತವಾಗಿ ಹೇಳಿದಾಗ ಕಾರ್ಯಕ್ರಮದಲ್ಲಿ ನಗುವಿನ ಅಲೆ ಎದ್ದಿತು.
ಮಾಧ್ಯಮವು ವ್ಯಾಪಾರೀಕರಣಗೊಳ್ಳಬಾರದು, ಸನಾತನ ಕಾಲದಿಂದ ಉಳಿದಿರುವ ಬದ್ಧತೆಯೇ ಮುಂದುವರಿಯಲಿ. ಮಾಧ್ಯಮಗಳು ಜಗತ್ತಿನ ಪ್ರಗತಿಗೆ ಮುಖ್ಯವಾಗಿದ್ದು, ಕೇಂದ್ರ ಸರ್ಕಾರವು ಜಿಎಸ್‌ಟಿ ಕುರಿತು ತೋರುತ್ತಿರುವ ಮಲತಾಯಿ ಧೋರಣೆಯ ಬಗ್ಗೆ ಬೆಳಕು ಚೆಲ್ಲುವಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದರು.










