ಅರಸೀಕೆರೆ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ತಮ್ಮ ಶಿಕ್ಷಣದ ಬಗ್ಗೆ ಗಮನ ಇಡಬೇಕೇ ವಿನಹ, ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸು ಹರಿಯ ಬಿಡುವ ಮೂಲಕ ಚಂಚಲತೆಗೆ ಒಳಗಾದರೆ ತಮ್ಮ ಬದುಕು ದುಸ್ತರವಾಗಲಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ, ಸರಸ್ವತಿ ಪೂಜೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿದರೆ ಪಠ್ಯೇತರ ಚಟುವಟಿಕೆಯಲ್ಲಿ ತಾವು ಬೆಳೆಸಿಕೊಳ್ಳುವ ಹವ್ಯಾಸ ತಮ್ಮ ಬದುಕನ್ನು ವಿಕಾಸಗೊಳಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಈ ಗೋಲ್ಡನ್ ಅವಧಿಯಲ್ಲಿ ಮನದಟ್ಟು ಮಾಡಿಕೊಳ್ಳುವಂತೆ ಕರೆ ನೀಡಿದರು.
ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಮಾತನಾಡಿ,ಪ್ರಸ್ತುತ ಜಗತ್ತು ತಾಪಮಾನ ಏರುವಿಕೆ, ಹವಾಮಾನದಲ್ಲಿ ಆಗುತ್ತಿರುವ ಏರಿಳಿತಗಳು, ಭವಿಷ್ಯದಲ್ಲಿ ಮನುಕುಲಕ್ಕೆ ಅಷ್ಟೇ ಅಲ್ಲದೆ, ಸಕಲ ಜೀವ ಸಂಕುಲಕ್ಕೂ ಸವಾಲಾಗಿ ಪರಿಣಮಿಸುತ್ತಿದೆ.
ಈ ಬಗ್ಗೆ ವಿದ್ಯಾರ್ಥಿಗಳು ವಿಶೇಷ ಗಮನ ಹರಿಸುವ ಮೂಲಕ ಪ್ರಕೃತಿಯ ಮೇಲೆ ಸಮರ ಸಾರುತ್ತಿರುವ ಹವಾಮಾನ ವೈಪರೀತ್ಯ,ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಕೃತಿಗೆ ಕೊಡುಗೆ ನೀಡುವುದನ್ನು ಪ್ರಕೃತಿ ಬಯಸುತ್ತಿದೆ ಎಂದು ಮನವರಿಕೆ ಮಾಡಿದರು.
ಕಾಲೇಜಿನ ಸಲಹಾ ಸಮಿತಿ ಸದಸ್ಯರಾದ ದಿವಾಕರ್ ಮಾತನಾಡಿ, ಸಿರಿಗೆರೆ ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಹೊಯ್ಸಳೇಶ್ವರ ಶಿಕ್ಷಣ ಸಂಸ್ಥೆಯು ತಮ್ಮಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಶಿಕ್ಷಣ ಮಾತ್ರ ಬೋಧನೆ ಮಾಡುತ್ತಿಲ್ಲ, ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಗುರುಹಿರಿಯರ ಗೌರವಿಸುವ ಮನೋಭಾವ, ಸಮಾಜ ಮುಖಿ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿದ್ದು, ಇದರ ಪ್ರಯೋಜನವನ್ನು ತಾಲೂಕಿನ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಬಿ.ಶಶಿಧರ್, ಎಲ್ಎಸಿ ತರಳಬಾಳು ಶಾಲೆಯ ಅಧ್ಯಕ್ಷರಾದ ಮಹಾಲಿಂಗಸ್ವಾಮಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಆನಂದ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಅಶೋಕ್ ಟಿ.ಸಿ., ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಮೇಶ್, ಕವಯಿತ್ರಿ ಹರ್ಷಿಯಾ ಬಾನು ಇದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.










