ಹಾಸನ : ಹಾಸನ ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಅಶ್ವರೂಢ ಪ್ರತಿಮೆ ನಿರ್ಮಾಣದತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ನಗರದ ಸರ್ಕಲ್ ಜಾಗವನ್ನು ಈ ಪ್ರತಿಮೆಗೆ ಮೀಸಲಿಡುವಂತೆ ಹಾಸನ ಮಹಾನಗರ ಪಾಲಿಕೆಯ ಮೇಯರ್ ಗೀರಿಶ್ ಚನ್ನವೀರಪ್ಪ ಅವರಿಗೆ ಸೆಪ್ಟೆಂಬರ್ 29, 2025 ರಂದು ಹಾಸನ ತಣ್ಣೀರುಹಳ್ಳ ಮಠದ ಸಭಾಂಗಣದಲ್ಲಿ ನಡೆದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮನವಿಪತ್ರ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 21, 2025 ರಂದು ಹಾಸನದಲ್ಲಿ ನಡೆದ ಬಸವ ಸಂಸ್ಕೃತಿ ರಥಯಾತ್ರೆ ಕಾರ್ಯಕ್ರಮದಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಮೇಯರ್ ಗೀರಿಶ್ ಚನ್ನವೀರಪ್ಪ ಅವರಿಗೆ ಸಮಾಜದ ಪರ ಹೋರಾಟ ಮತ್ತು ಬೆಂಬಲಕ್ಕಾಗಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಯರ್ ಗೀರಿಶ್ ಚನ್ನವೀರಪ್ಪ ಅವರು, “ಮಹಾನಗರಪಾಲಿಕೆ ಕಚೇರಿ ಸಮೀಪದಲ್ಲಿರುವ ಬಸವ ಸರ್ಕಲ್‌ನಲ್ಲಿ ಜಗಜ್ಯೋತಿ ಬಸವೇಶ್ವರರ ಅಶ್ವರೂಢ ಪ್ರತಿಮೆ ಸ್ಥಾಪನೆ ಸಾಧ್ಯ. ಬಸವೇಶ್ವರರು ಎಲ್ಲ ಸಮಾಜಕ್ಕೂ ಸೇರಿದ ಮಹನೀಯರು. ಅವರು ಸಾರಿದ ಸಮಾಜ ಸಮಾನತೆಯ ತತ್ವ, ಮೇಲುಕೀಳು ಭಾವನೆಗಳನ್ನು ತೊಡೆದುಹಾಕಿದ ಸಂದೇಶ ಇಂದು ಕೂಡ ಮಾರ್ಗದರ್ಶಕವಾಗಿದೆ. ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಹಾಸನ ಮಹಾನಗರ ಪಾಲಿಕೆಯ ಸಂಪೂರ್ಣ ಬೆಂಬಲವಿದೆ” ಎಂದು ಘೋಷಿಸಿದರು.
ಪ್ರಮುಖ ಧಾರ್ಮಿಕ ನಾಯಕರ ಹಾಜರಾತಿ
ಕಾರ್ಯಕ್ರಮದಲ್ಲಿ ತಣ್ಣೀರುಹಳ್ಳ ಮಠದ ಮಠಾಧೀಶ ಶ್ರೀ ವಿಜಯಕುಮಾರ್ ಸ್ವಾಮೀಜಿ, ಪುಶ್ಪಗಿರಿ ಮಠದ ಶ್ರೀ ಸೋಮಶೇಖರ್ ಸ್ವಾಮೀಜಿ, ಕೊಳಗುಂದ ಮಠದ ಶ್ರೀ ಚಂದ್ರಶೇಖರ್ ಸ್ವಾಮೀಜಿ, ಮಾಡಾಳು ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕೇಂದ್ರ ಸಮಿತಿ ಸದಸ್ಯ ಗ್ರಾನೈಟ್ ರಾಜಶೇಖರ್, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಅಲೂರು ಘಟಕದ ಅಧ್ಯಕ್ಷ ಚಿಕ್ಕ ಕಣಗಲ್ ಅಜೀತ್, ಬೇಲೂರು ಘಟಕದ ಅಧ್ಯಕ್ಷ ಅಡಗೂರು ಬಸವರಾಜ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಮಹಿಳಾ ಹಾಗೂ ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಅಂತ್ಯದಲ್ಲಿ ಬಸವ ಸಂಸ್ಕೃತಿ ರಥಯಾತ್ರೆಯಲ್ಲಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರನ್ನು ಗೌರವಿಸಲಾಯಿತು.










