ಹಾಸನ(HASSAN) ಜೂನ್ 27: ಜಿಲ್ಲೆಯಲ್ಲಿ ಹೃದಯಾಘಾತದಿಂದ ಮತ್ತೊಂದು ಸಾವು ಸಂಭವಿಸಿದೆ.
ಪೆನ್ಷನ್ ಮೊಹಲ್ಲಾದ ಮಂಜುನಾಥ್ (51) ಎಂಬವರು ಬುಧವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೂಲತಃ ಆಲೂರು ತಾಲ್ಲೂಕಿನ ಬಾವಿಕೊಪ್ಪಲು ಗ್ರಾಮದವರಾದ ಮಂಜುನಾಥ್, ಹಲವು ವರ್ಷಗಳಿಂದ ಹಾಸನದಲ್ಲಿ ನೆಲೆಸಿದ್ದರು. ಈ ಹಿಂದೆ ಅಂಬ್ಯುಲೆನ್ಸ್ ಚಾಲಕರಾಗಿದ್ದ ಇವರು, ಕೆಲ ವರ್ಷಗಳಿಂದ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ಕಾರಿನ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಬುಧವಾರ ತಡರಾತ್ರಿ 1 ಗಂಟೆ ಸಮಯದಲ್ಲಿ ಮನೆಯಲ್ಲಿದ್ದಾಗ ಮಂಜುನಾಥ್ರವರಿಗೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಆಸ್ಪತ್ರೆಗೆ ದಾಖಲಾದರೂ, ಇಸಿಜಿ ಮಾಡಿ ವೈದ್ಯರಿಗೆ ಕರೆ ಮಾಡಿದ ಸಿಬ್ಬಂದಿ, ವೈದ್ಯರು ಬರುವವರೆಗೂ ಕುರ್ಚಿಯಲ್ಲೇ ಕುಳಿತಿದ್ದ ಮಂಜುನಾಥ್ರವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ವೈದ್ಯರು ಆಗಮಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 16 ಮಂದಿ ಸಾವನ್ನಪ್ಪಿರುವುದು ಜನರಲ್ಲಿ ಆತಂಕ ಮೂಡಿಸಿದೆ.










