ಹಳೇಬೀಡು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ “ಮಿಷನ್ ಶಕ್ತಿ ಯೋಜನೆ” ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಶುಕ್ರವಾರ ಜರುಗಿತು.
ಕಾರ್ಯಕ್ರಮಕ್ಕೆ ಬೇಲೂರಿನ ವಕೀಲ ಪುಟ್ಟಸ್ವಾಮಿಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
“ಇಂದು ಹೆಣ್ಣು ಮಕ್ಕಳು ಸೈನಿಕರಾಗಿ, ಜಿಲ್ಲಾಾಧಿಕಾರಿಗಳಾಗಿ, ಪೊಲೀಸ್ ವರಿಷ್ಠ ಅಧಿಕಾರಿಗಳಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವಲ್ಲಿ ಹೆಣ್ಣು ಮಕ್ಕಳು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹೀಗಿರುವಾಗ ಹೆಣ್ಣು ಮಕ್ಕಳನ್ನು ಭ್ರೂಣದಲ್ಲಿಯೇ ಕೊಲ್ಲುವುದು ಅಕ್ಷಮ್ಯ ಅಪರಾಧವಾಗಿದೆ. ಕಾನೂನಿನ ಅಡಿಯಲ್ಲಿ ಇದಕ್ಕೆ ಕಠಿಣ ಶಿಕ್ಷೆಗಳಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಿಷನ್ ಶಕ್ತಿ ಯೋಜನಾ ಸಂಯೋಜಕ ರೂಪವತಿ ಅವರು ಹೆಣ್ಣು ಮಕ್ಕಳ ಲೈಂಗಿಕ ಆರೋಗ್ಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಂಬಾಕು ನಿಯಂತ್ರಣ ವಿಭಾಗದ ವಿಮಲಾ ಅವರು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು.
ಹಳೇಬೀಡು ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ರೇಖಾ ಅವರು ಹಾಲಿನ ಪೌಷ್ಟಿಕತೆ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆಪಿಎಸ್ ಶಾಲೆಯ ಪ್ರಭಾರಿ ಉಪಪ್ರಾಂಶುಪಾಲ ಮೋಹನ್ ರಾಜ್ ಮಾತನಾಡಿ, ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗೆ ಹಲವು ಕಲ್ಯಾಣ ಯೋಜನೆಗಳನ್ನು ರೂಪಿಸಿದೆ. ಇವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ವರ್ಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಶಿಕ್ಷಕ ಶಶಿಧರ್ ನಿರೂಪಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.










