ಬೆಂಗಳೂರು : ಅಮೆಜಾನ್ ಕಂಪನಿಯ ಕಾರ್ಪೊರೇಟ್ ಪ್ರಧಾನ ಕಚೇರಿ ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ್

ಬೆಂಗಳೂರು,  ಫೆಬ್ರವರಿ,23,2026 (www.kannadapost.com) : ಅಮೆರಿಕದ ಇ-ಕಾಮರ್ಸ್ ದಿಗ್ಗಜ Amazon ಕಂಪನಿಯು ಯಲಹಂಕ ಸಮೀಪದ ವಿನಾಯಕ ನಗರದಲ್ಲಿ ನಿರ್ಮಿಸಿರುವ 11 ಲಕ್ಷ ಚದರ ಅಡಿ ವಿಸ್ತಾರದ ಸುಸಜ್ಜಿತ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿದರು.


ರಾಜ್ಯದಲ್ಲಿ ಅಮೆಜಾನ್ 10ನೇ ಕಾರ್ಪೊರೇಟ್ ಕಚೇರಿ

ಈ ವೇಳೆ ಮಾತನಾಡಿದ ಎಂ.ಬಿ ಪಾಟೀಲ್, ಇದು ರಾಜ್ಯದಲ್ಲಿ ಅಮೆಜಾನ್ ಕಂಪನಿಯ 10ನೇ ಕಾರ್ಪೊರೇಟ್ ಕಚೇರಿಯಾಗಿದೆ ಎಂದು ತಿಳಿಸಿದರು.

ರಾಜ್ಯದೊಂದಿಗೆ ಎರಡು ದಶಕಗಳ ಬಾಂಧವ್ಯ ಹೊಂದಿರುವ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 35 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದ್ದು, 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು ನೀಡಲಿದೆ. ಇದರೊಂದಿಗೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.


ಆರ್ಥಿಕವಾಗಿ ಕರ್ನಾಟಕ ಅಗ್ರಸ್ಥಾನ

  • ರಾಜ್ಯದ ತಲಾ ಆದಾಯ ₹3.80 ಲಕ್ಷಕ್ಕಿಂತ ಹೆಚ್ಚು

  • ದೇಶದ ಬೊಕ್ಕಸಕ್ಕೆ ₹1.6 ಲಕ್ಷ ಕೋಟಿ ಜಿ.ಎಸ್.ಟಿ ಪಾವತಿ

  • ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು 21ನೇ ಸ್ಥಾನ

  • ಟೆಕ್-ಸಿಟಿ ಸೂಚ್ಯಂಕದಲ್ಲಿ ಮೊದಲ 30 ಸ್ಥಾನಗಳಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ

  • ಕಳೆದ ವರ್ಷ 14.6 ಮಿಲಿಯನ್ ಚದರ ಅಡಿ ಕೈಗಾರಿಕಾ ವಹಿವಾಟು ಭೋಗ್ಯಕ್ಕೆ


ಜಿಸಿಸಿ ಹಾಗೂ ಇ-ಕಾಮರ್ಸ್‌ನಲ್ಲಿ ಮುನ್ನಡೆ

ದೇಶದ 900 ಜಿಸಿಸಿ ಕೇಂದ್ರಗಳಲ್ಲಿ ಶೇ.35ರಷ್ಟು ಕರ್ನಾಟಕದಲ್ಲಿವೆ.

ರಾಜ್ಯದಲ್ಲಿ 42.48 ಲಕ್ಷ ಟನ್ ದಾಸ್ತಾನು ಸಾಮರ್ಥ್ಯದ ಉಗ್ರಾಣಗಳು ಹಾಗೂ 233 ಶೀತಲಗೃಹಗಳಿವೆ. ಇ-ಕಾಮರ್ಸ್ ವಹಿವಾಟು ಶೇ.11ರಷ್ಟು ಬೆಳವಣಿಗೆ ಸಾಧಿಸುತ್ತಿದೆ ಎಂದು ಸಚಿವರು ವಿವರಿಸಿದರು.


ಕೈಗಾರಿಕಾ ಸ್ನೇಹಿ ಕಾರ್ಯಪರಿಸರ

ರಾಜ್ಯವು ಪ್ರತ್ಯೇಕ ರೈಲು ಕಾರಿಡಾರ್, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್, ಡ್ರೈಪೋರ್ಟ್ ಮತ್ತು ಟ್ರಕ್ ಟರ್ಮಿನಲ್ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ.

ಅಮೆಜಾನ್ ಸೇರಿದಂತೆ ಜಾಗತಿಕ ಕಂಪನಿಗಳು ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಿ, ಇಲ್ಲಿಯೇ ಉತ್ಪಾದನೆ ಮಾಡಿ ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡಬೇಕು ಎಂದು ಎಂ.ಬಿ ಪಾಟೀಲ್ ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು

ಕಾರ್ಯಕ್ರಮದಲ್ಲಿ ಅಮೆಜಾನ್ ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥ ಡೇವಿಡ್ ಝಪೊಲೋಸ್ಕಿ, ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ, ಉಪಾಧ್ಯಕ್ಷ ಸಮೀರ್ ಕುಮಾರ್ ಹಾಗೂ ಜಾಗತಿಕ ಆಸ್ತಿಪಾಸ್ತಿ ವಿಭಾಗದ ಉಪಾಧ್ಯಕ್ಷ ಸೀನ್ ಲೀ ಉಪಸ್ಥಿತರಿದ್ದರು.