ಆಲೂರು: ಧರ್ಮ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಉನ್ನತ ಮನೋಬಲದ ಜ್ಞಾನ ನೀಡುವ ಶಿಕ್ಷಣ ಜಾರಿಗೊಳಿಸುವ ಮೂಲಕ ಸಶಕ್ತ ಹಾಗೂ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಪದವಿ ಕಾಲೇಜು ಪ್ರಾಂಶುಪಾಲ ಟಿ.ಪಿ ಪುಟ್ಟರಾಜು ತಿಳಿಸಿದರು.
ಆಲೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮದಿನವಾದ ನವೆಂಬರ್ 11ನ್ನು ಪ್ರತಿವರ್ಷ ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತಿದೆ. ಅಬ್ದುಲ್ ಕಲಾಂ ರವರು ದೇಶಕ್ಕೆ ನೀಡಿದ ಸಂದೇಶ, ಅವರ ಜೀವನಾದರ್ಶಗಳು ಇಂದಿನ ಯುವಪೀಳಿಗೆಗೆ ದಾರಿದೀವಿಗೆಯಾಗಿವೆ. ವಿಶೇಷವಾಗಿ ವಿದ್ಯಾರ್ಥಿಗಳು ಕಲಾಂ ರವರ ವಿಚಾರಧಾರೆ ಮೈಗೂಡಿಸಿಕೊಂಡು ಮಾದರಿಯಾಗಿ ಬದುಕಲು ಕಲಿಯಬೇಕು. ನಾಡಿನ ಎಲ್ಲಾ ಆದರ್ಶವಾದಿಗಳ ಕೃತಿ ಓದಿ ಅನುಸರಿಸುವುದರ ಜತೆಗೆ ಸ್ವಯಂ ಪರಿವರ್ತನೆಗೊಳ್ಳಬೇಕು ಎಂದು ಕರೆ ನೀಡಿದರು.
ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಕೆ.ಎನ್ ರಮೇಶ್ ಮಾತನಾಡಿ, ಸದೃಢ ಸಮಾಜದ ಹೊಣೆ ಯುವಕರದ್ದಾಗಿದೆ. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹಾಗೂ ದೇಶದ ನವ ನಿರ್ಮಾಣ ಕಾರ್ಯದಲ್ಲಿ ಯುವಕರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದ ಅವರು ರಾಷ್ಟ್ರದ ಅಭಿವೃದ್ಧಿಯಲ್ಲಿ ಮತ್ತು ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣದ ಮಹತ್ವ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಜೆ.ಜಿ ನಟರಾಜ, ಡಾ.ರಾಘವೇಂದ್ರ ಸೇರಿದಂತೆ ಎಲ್ಲಾ ಬೋಧಕ-ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










