ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಬಳಿ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ನಡೆಯುತ್ತಿದ್ದರೂ, ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ ಎಂದು ಆಪ್ ಮುಖಂಡ ಶಿವಕುಮಾರ್ ಆರೋಪಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಜಮೀನು ಸನಂ 38,36ರಲ್ಲಿ ಎಗ್ಗಿಲ್ಲದೆ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದು ಹೆಚ್ಆರ್ಪಿ ರಿಸರ್ವ್ ಲ್ಯಾಂಡ್ ಸಹ ಆಗಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳಾದ ಎಸಿ, ತಹಸೀಲ್ದಾರ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಂಚ ಹಣಕ್ಕಾಗಿ ಅನುಮತಿ ನೀಡಿದ್ದಾರೆ ಎಂದು ದೂರಿದರು.
ಗ್ರಾಮದ ರವಿಕುಮಾರ್ ಮಾತನಾಡಿ, ಕಲ್ಲು ಗಣಿಗಾರಿಕೆ, ಕ್ರರ್ಸ್ ನಡೆಸುತ್ತಿರುವವರು ನಿಯಮ ಪಾಲಿಸುತ್ತಿಲ್ಲ. ಧೂಳು ಇಡೀ ಚಿಗಳ್ಳಿ ಗ್ರಾಮದೊಳಕ್ಕೆ ರಾಜಾರೋಷವಾಗಿ ನುಗ್ಗುತ್ತಿರುವ ಅನೇಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಕಿಡಿ ಕಾರಿದರು.
ಚಿಗಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನೇಕ ರೀತಿಯ ತೊಂದರೆ ಆಗುತ್ತಿದ್ದರೂ, ಅಧಿಕಾರಿಗಳು ಲಂಚಕ್ಕೆ ದಾಸರಾಗಿ ಕಣ್ಣಿದ್ದೂ ಕುರುಡರಾಗಿದ್ದಾರೆ ಎಂದು ದೂರಿದರು.ನಿಯಮ ಉಲ್ಲಂಘನೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರೆ ತಹಸೀಲ್ದಾರ್ ರಾತ್ರಿವೇಳೆ ಪರಿಶೀಲನೆಗೆ ಬರುತ್ತಾರೆ.
ಈ ಬಗ್ಗೆ ಕೇಳಲು ಹೋದರೆ ನಮ್ಮ ಮೇಲೆಯೇ ಹಲ್ಲೆ ಮಾಡಲು ಬರುತ್ತಾರೆ ಎಂದು ಹೇಳಿದರು. ಬ್ಲಸ್ಟ್ನಿಂದ ಮಕ್ಕಳು ಬೆಚ್ಚುತ್ತಿವೆ. ಜಾನುವಾರು ಜೀವ ಕಳೆದುಕೊಳ್ಳುತ್ತಿವೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದರೂ ಅಧಿಕಾರಿಗಳಿಗೆ ಹಣವೇ ಮುಖ್ಯವಾಗಿದೆ. ಈ ಸಂಬಂಧ ಹೈಕೋರ್ಟ್ನಲ್ಲಿ ಕೇಸ್ ಇದ್ದರೂ, ಅದಕ್ಕೆ ಯಾರೂ ಕ್ಯಾರೇ ಎನ್ನುತ್ತಿಲ್ಲ. ಇದು ಹೀಗೆ ಮುಂದುವರಿದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ವರಜರಾಜು, ಮಹೇಶ್, ಕಾಂತ, ರಘು ಇದ್ದರು.










