ಬೇಲೂರು: ಬಾಣಂತನಕ್ಕೆಂದು ತವರಿನಲ್ಲಿದ್ದ ಪತ್ನಿ ಹಾಗೂ
ಒಂಬತ್ತು ತಿಂಗಳ ಮಗುವನ್ನು ಭೇಟಿಯಾಗಲು ತೆರಳಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗುವನ್ನು ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಕುಸಿದು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮಾದಿಹಳ್ಳಿ ಗ್ರಾಮದ ರವಿಕುಮಾರ್ (30) ಮೃತಪಟ್ಟವರು. ಸೋಮವಾರ ಸಂಜೆ ತನ್ನ ಮನೆಯಿಂದ ಹೊರಟು, ಪತ್ನಿಯ ಮನೆಯಾದ ಬೇಲೂರು ತಾಲೂಕಿನ ಹಲ್ಮಿಡಿ ಸಮೀಪದ ಯಕಶೆಟ್ಟಿಹಳ್ಳಿಗೆ ತೆರಳಿದ್ದರು. ಅಲ್ಲಿ ಪತ್ನಿಯೊಂದಿಗೆ ಮಾತನಾಡಿ, ತಮ್ಮ ಒಂಬತ್ತು ತಿಂಗಳ ಮಗುವಿನೊಂದಿಗೆ ಸ್ವಲ್ಪ ಸಮಯ ಕಳೆದಿದ್ದಾರೆ.
ಆದರೆ, ಕೆಲವೇ ಕ್ಷಣಗಳಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ರವಿಕುಮಾರ್ ಕುಸಿದು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರವಿಕುಮಾರ್ ರೈತ ಕುಟುಂಬಕ್ಕೆ ಸೇರಿದವರಾಗಿದ್ದು, ಕೃಷಿಯ ಮೂಲಕ ಜೀವನ ಸಾಗಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಅವರು, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಅವರ ಅಕಾಲಿಕ ಮರಣ ಕುಟುಂಬಸ್ಥರಿಗೆ ಆಘಾತವನ್ನುಂಟುಮಾಡಿದೆ.ಮಂಗಳವಾರ ರವಿಕುಮಾರ್ ಅವರ ಪಾರ್ಥಿವ ಶರೀರವನ್ನು ಅವರ ತವರು ಗ್ರಾಮವಾದ ಮಾದಿಹಳ್ಳಿಗೆ ಕೊಂಡೊಯ್ಯಲಾಯಿತು ಹಾಗೂ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.










