12.7 C
Munich
Home News ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ: ರೋಗಿಗಳ ವಾರ್ಡ್‌ಗೆ ನುಗ್ಗಿದ ಬೀದಿ ನಾಯಿ

ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ: ರೋಗಿಗಳ ವಾರ್ಡ್‌ಗೆ ನುಗ್ಗಿದ ಬೀದಿ ನಾಯಿ

ಹಾಸನ: ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ತೊಡಕಾಗುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಆಸ್ಪತ್ರೆಯ ಮೂರನೇ ಮಹಡಿಯ ವಾರ್ಡ್ ನಂಬರ್ 340ಕ್ಕೆ ಬೀದಿ ನಾಯಿಯೊಂದು ನುಗ್ಗಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿ ವೇಳೆ ರೋಗಿಗಳು ಚಿಕಿತ್ಸೆ ಪಡೆದು ಮಲಗಿರುವಾಗ ಬೀದಿ ನಾಯಿಯೊಂದು ವಾರ್ಡ್‌ನೊಳಗೆ ಓಡಾಡಿದ ಘಟನೆ ರೋಗಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಿರ್ಲಕ್ಷ್ಯದಿಂದಾಗಿ ನಾಯಿಯೊಂದು ಮೂರನೇ ಅಂತಸ್ತಿನವರೆಗೆ ತಲುಪಿ ವಾರ್ಡ್‌ಗೆ ಪ್ರವೇಶಿಸಿದೆ ಎಂದು ಆರೋಪಿಸಲಾಗಿದೆ.

ರೋಗಿಗಳ ಕಡೆಯವರು ಆಸ್ಪತ್ರೆಗೆ ಬಂದಾಗ ಉಡಾಫೆಯಿಂದ ವರ್ತಿಸುವ ಸೆಕ್ಯೂರಿಟಿ ಗಾರ್ಡ್‌ಗಳು, ಬೀದಿ ನಾಯಿಯೊಂದು ವಾರ್ಡ್‌ಗೆ ನುಗ್ಗಿದಾಗ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ನಾಯಿಯು ವಾರ್ಡ್‌ನಲ್ಲಿ ಸುತ್ತಾಡಿ, ಯಾವುದೇ ತೊಂದರೆಯಾಗದೆ ಹೊರಗೆ ತೆರಳಿದ್ದರೂ, ಈ ಘಟನೆ ಆಸ್ಪತ್ರೆಯ ಭದ್ರತೆ ಮತ್ತು ಸ್ವಚ್ಛತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಹಾಸನದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದು, ಜಿಲ್ಲಾಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ, ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!