ಹಾಸನ: ಪಹಲ್ಗಾಮ್ ನರಮೇಧದಲ್ಲಿ ಬಲಿಯಾದ ಅಮಾಯಕರಿಗೆ ಹಾಗೂ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರಿಗೆ ಹಾಸನ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಇಂದು ಜರುಗಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಂಸದ ಶ್ರೇಯಸ್ ಪಟೇಲ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಿದ ಸಂಸದ ಶ್ರೇಯಸ್ ಪಟೇಲ್, ಭಯೋತ್ಪಾದನೆ ವಿರುದ್ಧ ಇಡೀ ದೇಶ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ನೀಡಿದರು. “ಕೇಂದ್ರ ಸರ್ಕಾರದ ಭಯೋತ್ಪಾದನೆ ನಿಗ್ರಹ ನಿರ್ಧಾರಕ್ಕೆ ನಾವು ಬೆಂಬಲ ನೀಡಿದ್ದೇವೆ. ರಾಹುಲ್ ಗಾಂಧಿ ಅವರ ಸೂಚನೆಯಂತೆ ಕಾಂಗ್ರೆಸ್ ಈ ನಿಟ್ಟಿನಲ್ಲಿ ಒಗ್ಗಟ್ಟಾಗಿದೆ. ಆದರೆ, ಅಮೆರಿಕಾಮಧ್ಯಸ್ಥಿಕೆ ವಹಿಸಿ ತನ್ನ ಹೆಸರು ತೆಗೆದುಕೊಂಡಿದ್ದು ಅನಗತ್ಯವಾಗಿತ್ತು. ಪ್ರಧಾನಿ ಮೋದಿಯವರೇ ಒಳ್ಳೆಯ ನಿರ್ಧಾರ ಕೈಗೊಳ್ಳಬಹುದಿತ್ತು,” ಎಂದು ಅವರು ಹೇಳಿದರು.
ಕದನ ವಿರಾಮದ ಬಗ್ಗೆ ಮಾತನಾಡಿದ ಶ್ರೇಯಸ್, “ಯುದ್ಧ ಮುಂದುವರಿದಿದ್ದರೆ ಭಾರತ ಗೆಲ್ಲುತ್ತಿತ್ತು. ಪಾಕಿಸ್ತಾನಕ್ಕೆ ಪಾಠ ಕಲಿಸಬಹುದಿತ್ತು. ಆದರೆ, ದೇಶದ ಆರ್ಥಿಕತೆಗಾಗಿ ಕದನ ವಿರಾಮ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಯೋತ್ಪಾದನೆ ವಿರುದ್ಧ ನಾವು ರಾಜಿಯಿಲ್ಲದೆ ನಿಲ್ಲಬೇಕು. ಪಹಲ್ಗಾಮ್ ನರಮೇದದಲ್ಲಿ ತಾಯಂದಿರು, ಮಕ್ಕಳು ಕಣ್ಣೀರಿಟ್ಟಿದ್ದಾರೆ. ಆ ದುರಂತವನ್ನು ಎಂದಿಗೂ ಮರೆಯಲಾಗದು,” ಎಂದರು.
ಅಮೆರಕಾದ ಮಧ್ಯಸ್ಥಿಕೆಯನ್ನು ಟೀಕಿಸಿದ ಅವರು, “ಇದು ದೇಶದ ಪ್ರತಿಷ್ಠೆ ಮತ್ತು ಅಳಿವು-ಉಳಿವಿನ ಪ್ರಶ್ನೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳ ನೋವಿಗೆ ಗೌರವ ಕೊಡಬೇಕು. ಅಮೆರಕಾಕ್ಕೆ ಯುದ್ಧವನ್ನು ನಿಲ್ಲಿಸಿ ಹೆಸರು ಗಳಿಸುವ ಅಗತ್ಯವಿರಲಿಲ್ಲ,” ಎಂದು ಒತ್ತಿ ಹೇಳಿದರು.
ಪವರ್ ಶೇರಿಂಗ್ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಶ್ರೇಯಸ್, “ಈ ಬಗ್ಗೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಹೈಕಮಾಂಡ್ ಮಾರ್ಗದರ್ಶನದಂತೆ ನಡೆಯುತ್ತೇವೆ. ಮಾಧ್ಯಮಗಳ ಮುಂದೆ ಈ ವಿಷಯದ ಬಗ್ಗೆ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚಿಸಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.









